ದುರ್ಗಾ ಪೂಜೆ ಸನಿಹವಾಗುತ್ತಲೇ, ಪಶ್ಚಿಮ ಬಂಗಾಳಾದ್ಯಂತ ಪ್ರತಿಷ್ಠಾಪಿಸಲಾಗುವ 36,000 ದುರ್ಗಾ ಪೂಜಾ ಪೆಂಡಾಲ್‌ಗಳಿಗೆ ತಲಾ 50,000 ರೂ.ಗಳ ನೆರವು ನೀಡಲು ಮಮತಾ ಬ್ಯಾನರ್ಜಿ ಸರ್ಕಾರ ನಿರ್ಧರಿಸಿದೆ. ಇವುಗಳಲ್ಲಿ 2,500 ಕ್ಲಬ್‌ಗಳು ಕೋಲ್ಕತ್ತಾ ನಗರದಲ್ಲೇ ಇವೆ.
ಸೆಪ್ಟೆಂಬರ್ 30ರಂದು ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನವಿದ್ದು, ಮಮತಾ ಬ್ಯಾನರ್ಜಿ ಇಲ್ಲಿಂದ ಸ್ಪರ್ಧಿಸಲಿದ್ದಾರೆ. ಇಂಥ ಸಂದರ್ಭದಲ್ಲಿ ಮೇಲ್ಕಂಡ ಘೋಷಣೆ ಮಾಡಿರುವ ಬಗ್ಗೆ ವಿರೋಧ ಪಕ್ಷ ಬಿಜೆಪಿ ಕಿಡಿ ಕಾರಿದೆ.
ಕೊಲ್ಕತ್ತಾದಲ್ಲಿ ಪಿಪಿಇ ಕಿಟ್ ಧರಿಸಿ ದಾಂಡಿಯಾ ನೃತ್ಯ
ಕೋಲ್ಕತ್ತಾದಲ್ಲಿರುವ ರಾಜ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ ಬಿಜೆಪಿ ನಾಯಕರ ನಿಯೋಗ ದೀದಿಯಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ, “ಹಿಂದಿನ ವರ್ಷದಂತೆ ಈ ವರ್ಷವೂ ದುರ್ಗಾ ಪೂಜಾ ಸಮಿತಿಗಳಿಗೆ ನೆರವು ನೀಡಲಾಗುತ್ತಿದೆ” ಎಂದಿದ್ದಾರೆ.
“ಕೋವಿಡ್ ನಿರ್ವಹಣೆಯ ಕಾರಣದಿಂದ ದುರ್ಗಾ ಪೂಜಾ ಪೆಂಡಾಲ್‌ಗಳ ಸಿದ್ಧತೆಗೆ ಬಹಳ ಸಮಯ ಬೇಕಾಗುವ ಕಾರಣ, ಅಲ್ಲದೇ ಚುನಾವಣೆ ಮುಗಿದ ಬಳಿಕ ಬಹಳ ತಡವಾಗುವ ಕಾರಣ ನಾವು ಈಗಲೇ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಿದೆ” ಎಂದು ಮಮತಾ ಬ್ಯಾನರ್ಜಿ ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿದ್ದಾರೆ.
“ತೃಣಮೂಲ ಕಾಂಗ್ರೆಸ್ ನಡೆಸುವ ಓಲೈಕೆ ರಾಜಕಾರಣವು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಆಶಿಸುತ್ತೇವೆ. ನಾವು ನಾಳೆ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡುತ್ತೇವೆ” ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ತಿಳಿಸಿದ್ದಾರೆ.