ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಎಲ್ಲರೂ ಇಷ್ಟಪಡ್ತಾರೆ. ಇದು ಬಾಯಾರಿಕೆಯನ್ನು ತಣಿಸುತ್ತದೆ. ಜೊತೆಗೆ ಕಲ್ಲಂಗಡಿಯಲ್ಲಿ ಪೋಷಕಾಂಶಗಳು ಬೇಕಾದಷ್ಟಿವೆ. ಖನಿಜಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ. ಆದ್ರೆ ಕಲ್ಲಂಗಡಿ ಸೇವನೆ ಎಲ್ಲರಿಗೂ ಸೂಕ್ತವಲ್ಲ. ಕೆಲವರಿಗೆ ಇದು ಹಾನಿ ಕೂಡ ಮಾಡಬಲ್ಲದು.
ಕಲ್ಲಂಗಡಿಯಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಈ ಅಂಶವು ದೇಹದಲ್ಲಿ ಹೆಚ್ಚಾದರೆ, ಹೃದಯ ಬಡಿತ ಮತ್ತು ನಾಡಿ ಬಡಿತ ದುರ್ಬಲವಾಗಬಹುದು. ಹಾಗಾಗಿ ಹೃದಯದ ತೊಂದರೆ ಇರುವವರು ಕಲ್ಲಂಗಡಿ ಹಣ್ಣನ್ನು ತಿನ್ನದೇ ಇರುವುದು ಒಳಿತು.
ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ರೆ ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ. ಕಲ್ಲಂಗಡಿ ಕೂಡ ತಣ್ಣನೆಯ ಪರಿಣಾಮವನ್ನು ಹೊಂದಿರುವುದರಿಂದ ನೆಗಡಿ, ಕೆಮ್ಮು ಹೆಚ್ಚಾಗುವ ಅಪಾಯವಿರುತ್ತದೆ.
ಕಲ್ಲಂಗಡಿಯಲ್ಲಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇದೆ. ಇದನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಡಯಾಬಿಟಿಸ್ ಇರುವವರು ಕಲ್ಲಂಗಡಿಯನ್ನು ಸೇವಿಸಬಾರದು.
ಸಂಧಿವಾತದ ಸಮಸ್ಯೆ ಇರುವವರು ಕೂಡ ಕಲ್ಲಂಗಡಿಯನ್ನು ತಿನ್ನದೇ ಇರುವುದು ಉತ್ತಮ. ಕಲ್ಲಂಗಡಿ ಸೇವನೆಯಿಂದ ಅವರಿಗೆ ಊತ ಅಥವಾ ನೋವಿನ ಸಮಸ್ಯೆ ಜಾಸ್ತಿಯಾಗಬಹುದು.