ಯಾಕೋ ನೀವು ಮೊದಲಿನಷ್ಟು ಚುರುಕಾಗಿಲ್ಲ, ಯಾವುದರಲ್ಲೂ ಆಸಕ್ತಿ ಇಲ್ಲ. ಮುಖ್ಯವಾಗಿ ಯಾವುದರಲ್ಲೂ ನಂಬಿಕೆ ಇಲ್ಲ. ಎಲ್ಲಾ ವಿಷಯದಲ್ಲೂ ಋಣಾತ್ಮಕ ಅಂಶಗಳೇ ಹೆಚ್ಚು ಕಾಣುತ್ತಿದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು ಹಿಂಜರಿಕೆ. ಈ ರೀತಿ ನಿಮಗೆ ಭಾಸವಾಗುತ್ತಿದ್ದರೆ ಮೊದಲು ಎಚ್ಚೆತ್ತುಕೊಳ್ಳಿ. ಪ್ರತಿನಿತ್ಯ 10 ನಿಮಿಷಕ್ಕೂ ಹೆಚ್ಚು ಬಾರಿ ಯಾರೊಂದಿಗೆ ವ್ಯವಹರಿಸುತ್ತೀರಿ ಎನ್ನುವುದನ್ನು ಗಮನಿಸಿ. ಏಕೆಂದರೆ ಆ 10 ನಿಮಿಷ ನೀವು ನೆಗೆಟೀವ್ ಜನರೊಟ್ಟಿಗೆ ಕಳೆಯುತ್ತಿದ್ದರೆ ನಿಮ್ಮ ಶಕ್ತಿ ಕುಂದುತ್ತಿದೆ ಎಂದೇ ಅರ್ಥ. ಹಾಗಾದರೆ ಈ ನೆಗೆಟೀವ್ ಜನರನ್ನು ಗುರುತಿಸೋದು ಹೇಗೆ ಅನ್ನೋದಕ್ಕೆ ಕೆಲವು ಸೂಚನೆಗಳು ಇಲ್ಲಿವೆ ನೋಡಿ.
1. ಸದಾ ಚಿಂತಿತರಾಗಿರುವುದು : ಕಾರಣಗಳಿಲ್ಲದೇ ಚಿಂತಿಸುವುದು. ಪರಿಸ್ಥಿತಿ ಸರಿ ಇದ್ದರೂ ಅಲ್ಲಿ ಋಣಾತ್ಮಕ ಅಂಶಗಳನ್ನು ಗುರುತಿಸುವುದು. ಈ ಎಲ್ಲಾ ಕಾರಣಗಳನ್ನು ಹೇಳಿ ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವುದು ನೆಗೆಟೀವ್ ಜನರ ಮೊದಲ ಲಕ್ಷಣವಾಗಿದೆ.
2. ಯಾವುದನ್ನೂ ಒಪ್ಪುವುದಿಲ್ಲ : ಸಕಾರಾತ್ಮಕ ಮನಸ್ಸಿನವರಿಗೆ ಪ್ರಶಂಸಿಸಲು ಹಲವಾರು ಕಾರಣಗಳು ಸಿಗುತ್ತವೆ. ಆದರೆ ಋಣಾತ್ಮಕ ವ್ಯಕ್ತಿಗಳು ಎಲ್ಲದರಲ್ಲೂ ಕೊಂಕು ಹುಡುಕುತ್ತಾರೆ. ಊಟ, ನೋಟ, ಸ್ಥಳ, ಕೆಲಸ ಎಲ್ಲೂ ಅವರಿಗೆ ತೃಪ್ತಿಯೇ ಇರುವುದಿಲ್ಲ. ಈ ಪರಿಣಾಮವನ್ನು ಅವರ ಜೊತೆ ಇರುವವರು ಎದುರಿಸಬೇಕು.
3. ಸದಾ ದೂರುತ್ತಲೇ ಇರುವುದು : ಯಾವುದೇ ವಿಷಯವಾದರೂ ಸರಿ ಅದರ ಬಗ್ಗೆ ಸದಾ ದೂರುತ್ತಲೇ ಇರುತ್ತಾರೆ. ಇಡೀ ವಿಶ್ವವೇ ತಮ್ಮ ವಿರುದ್ಧ ತಿರುಗಿ ಬಿದ್ದಿದೆ ಎನ್ನುವಂತಿರುತ್ತಾರೆ. ರಾಜಕೀಯ ಬೆಳವಣಿಗೆಯಿಂದ ಹಿಡಿದು ಮನೆಯಲ್ಲಿ ಉಪ್ಪಿಟ್ಟಿನಲ್ಲಿ ಸಿಗುವ ಸಾಸಿವೆ ತನಕವು ಇವರ ದೂರು ಮುಗಿಯುವುದಿಲ್ಲ.
4. ಗೆಲುವಿನ ಅಭಾವ : ನಕಾರಾತ್ಮಕ ಮನೋಭಾವವು ಸಾಕಷ್ಟು ಸೋಲುಗಳ ಪ್ರತಿಫಲವಾಗಿರಬಹುದು. ಅವಕಾಶಗಳಿದ್ದರೂ ಒಮ್ಮೆ ಸೋತ ಪರಿಣಾಮ ಮತ್ತೆ ಗೆಲ್ಲಲು ಮನಸ್ಸು ಮಾಡುವುದೇ ಇಲ್ಲ. ಆದರೆ ಈ ಬಗ್ಗೆ ಸದಾ ಇನ್ನಿತರರ ಬಳಿ ದುಃಖ ತೋಡಿಕೊಳ್ಳುತ್ತಲೇ ಇರುತ್ತಾರೆ.
5. ನಿಮ್ಮ ಸಕಾರಾತ್ಮಕ ಶಕ್ತಿ ಕುಂದಿಸುವವರು : ಪ್ರತಿನಿತ್ಯ ಅವರೊಟ್ಟಿಗೆ ನೀವು ಮಾತನಾಡುತ್ತಾ ಕನ್ವಿನ್ಸ್ ಮಾಡಲು ಪ್ರಯತ್ನಿಸಿ ಸೋತಿರಬಹುದು. ಆದರೆ ಹಾಗೇ ಮಾಡುವ ಮೂಲಕ ಅವರು ನಿಮ್ಮ ಶಕ್ತಿಯನ್ನು ಕುಂದಿಸಿರುತ್ತಾರೆ. ಆದ್ದರಿಂದ ಈ ಎಲ್ಲಾ ಗುಣಲಕ್ಷಣಗಳಿರುವವರಿಂದ ದೂರ ಇರುವುದೇ ಒಳಿತು. ಒಂದು ವೇಳೆ ನೀವೇ ಅದಾಗಿದ್ದರೆ ನಿಮ್ಮನ್ನು ಮೊದಲು ಬದಲಿಸಿಕೊಳ್ಳಿ.