ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ರೆಯಿಲ್ಲವೆಂದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ನಿದ್ರೆ ನಮ್ಮ ನಡಿಗೆ ಮೇಲೂ ಪರಿಣಾಮ ಬೀರುತ್ತದೆ. ಇದು ಇತ್ತೀಚಿನ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೆಲವು ವಿದ್ಯಾರ್ಥಿಗಳ ಮೇಲೆ ಈ ಅಧ್ಯಯನ ನಡೆದಿದೆ. ಟ್ರೆಡ್ ಮಿಲ್ ನಲ್ಲಿ ಓಡುತ್ತಿರುವಾಗ ಪರೀಕ್ಷೆ ಮಾಡಲಾಗಿದೆ. ಕಡಿಮೆ ನಿದ್ರೆ ಮಾಡಿದ್ದ ವಿದ್ಯಾರ್ಥಿಗಳು ಟ್ರೆಡ್ ಮಿಲ್ ನಲ್ಲಿ ಸರಿಯಾಗಿ ನಡೆಯಲು ಸಾಧ್ಯವಾಗಿರಲಿಲ್ಲ.
ಸಂಶೋಧಕರು ನಿದ್ದೆಯ ಕೊರತೆ, ನಡಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ, ನಡೆಯಲು ಕಷ್ಟವಾಗುತ್ತಂತೆ. ನಡಿಗೆಯೊಂದೇ ಅಲ್ಲ, ಇನ್ನೂ ಅನೇಕ ಚಟುವಟಿಕೆಗಳು ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ದಿನಕ್ಕೆ 6 ಗಂಟೆ ನಿದ್ರೆ ಮಾಡಲು ಸಾಧ್ಯವಾಗಿಲ್ಲವೆಂದ್ರೆ ವಾರದಲ್ಲಿ ಕನಿಷ್ಠ ಎರಡು ದಿನ ಈ ನಿದ್ರೆಯ ಕೊರತೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಿ ಎಂದು ಸಂಶೋಧಕರು ಹೇಳಿದ್ದಾರೆ. ಪಾಳಿಯಲ್ಲಿ ಕೆಲಸ ಮಾಡುವವರು, ವೈದ್ಯಕೀಯ ವೃತ್ತಿಪರರು ಅಥವಾ ಮಿಲಿಟರಿಯಲ್ಲಿರುವವರು ಇದನ್ನು ಪಾಲಿಸಬೇಕೆಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳನ್ನು 14 ದಿನಗಳ ಕಾಲ ಪರೀಕ್ಷೆ ಮಾಡಲಾಯ್ತು. ವಿದ್ಯಾರ್ಥಿಗಳು ಎಷ್ಟು ಹೊತ್ತು ನಿದ್ದೆ ಮಾಡುತ್ತಾರೆ ಮತ್ತು ಎಷ್ಟು ದಿನ ಕ್ರಿಯಾಶೀಲರಾಗಿರುತ್ತಾರೆ ಎಂಬುದನ್ನು ಪತ್ತೆ ಮಾಡಲಾಯ್ತು. ವಾರವಿಡೀ ಸಾಕಷ್ಟು ನಿದ್ದೆ ಮಾಡದ ವಿದ್ಯಾರ್ಥಿಗಳೂ ಇದರಲ್ಲಿ ಇದ್ದರು. ಆದರೆ ವಾರಾಂತ್ಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ, ಅವರು ತಮ್ಮ ನಿದ್ರೆಯ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದ್ದರು ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.