ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ.
ಜೀವನ ಶೈಲಿಯಲ್ಲೂ ಹಲವು ಮಾರ್ಪಾಡುಗಳು ಆಗುವುದರಿಂದ ಕೋಪ, ದುಖದ ಭಾವನೆಗಳು ಕಾಡುವುದು ಸಹಜ. ಆಗ ಇಬ್ಬರಿಗೂ ಪ್ರತ್ಯೇಕ ಚಿಕಿತ್ಸೆಗಳು ಅನಿವಾರ್ಯವಾಗುತ್ತವೆ. ಇದೊಂದು ಅವಮಾನ ಎಂಬ ರೀತಿಯಲ್ಲಿ ಸ್ವೀಕೃತವಾಗಿರುವುದರಿಂದ ಇತರರ ಪ್ರೀತಿ ಬೆಂಬಲವಿಲ್ಲದೆ ಹತಾಶೆ ಭಾವ ಮೂಡುತ್ತದೆ.
ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿಯ ಕೊರತೆ, ದಿನವಿಡೀ ಮಾತನಾಡದೆ ಇರುವುದು, ಕಡಿಮೆ ನಿದ್ದೆ ಮಾಡುವುದು, ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದು, ಏಕಾಗ್ರತೆ ತಪ್ಪುವುದು, ನಾಚಿಕೆ ಅಥವಾ ನಿಷ್ಪ್ರಯೋಜಕ ಭಾವದಿಂದ ನರಳುವುದು ಸಾಮಾನ್ಯ ಲಕ್ಷಣ. ಇವರು ಮನೋಶಾಸ್ತ್ರಜ್ಞರನ್ನು ಭೇಟಿಯಾಗಬೇಕು.
ಅವರ ಬಳಿ ಎಲ್ಲಾ ಸಂಗತಿಗಳನ್ನು ಹಂಚಿಕೊಳ್ಳುವುದು ಬಹಳ ಮುಖ್ಯ. ಥೆರಪಿ ಮೂಲಕ ಇದಕ್ಕೆ ಚಿಕಿತ್ಸೆ ಪಡೆಯಬಹುದು. ದಂಪತಿಗಳು ಹೊಸ ಹವ್ಯಾಸ ರೂಢಿಸಿಕೊಳ್ಳುವ ಮೂಲಕ, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು.