ಕ್ವಿಕ್ ರೈಡ್ ಸೇರಿದಂತೆ ವಿವಿಧ ಮೊಬೈಲ್ ಆಪ್ಗಳ ಮೂಲಕ ಕಾರ್ಪೂಲಿಂಗ್ ಮಾಡಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗೆ ಖಾಸಗಿ ವಾಹನಗಳನ್ನು ಬಳಕೆ ಮಾಡುವುದು ಕಾನೂನು ಬಾಹಿರ ಎಂದೂ ಹೇಳಲಾಗಿದೆ.
ಭಾರೀ ಟ್ರಾಫಿಕ್ ಜಾಮ್ಗಳನ್ನು ತಪ್ಪಿಸೋಕೆ ಹಾಗೂ ಪ್ರಯಾಣಕ್ಕಾಗಿ ಖರ್ಚು ಮಾಡುವ ಹಣವನ್ನು ಉಳಿಸಲು ಕಾರ್ ಪೂಲಿಂಗ್ ಅಪ್ಲಿಕೇಶನ್ಗಳು ಸದ್ಯ ಭಾರಿ ಚಾಲ್ತಿಯಲ್ಲಿದೆ.
ಆ್ಯಪ್ಗಳನ್ನು ಬಳಸಿಕೊಂಡು ಕಾರ್ ಪೂಲಿಂಗ್ನಲ್ಲಿ ತೊಡಗಿಸಿಕೊಂಡವರು ಆರು ತಿಂಗಳ ಅವಧಿಗೆ ನೋಂದಣಿ ಪ್ರಮಾಣಪತ್ರ ಅಮಾನತು ಹಾಗೂ 5 ರಿಂದ 10 ಸಾವಿರ ರೂಪಾಯಿಗಳವರೆಗೆ ದಂಡದಂತಹ ಪರಿಣಾಮಗಳನ್ನು ಆಹ್ವಾನಿಸಬಹುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಸಿ ತಿಳಿಸಿದ್ದಾರೆ.
ಇನ್ನು ಇದರ ಜೊತೆಯಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲದ ಖಾಸಗಿ ಕಾರುಗಳನ್ನು ಒಟ್ಟುಗೂಡಿಸುತ್ತಿರೋದ್ರಿಂದ ಕಾರ್ ಪೂಲಿಂಗ್ ಅಪ್ಲಿಕೇಶನ್ಗಳು ಮಾನದಂಡಗಳನ್ನು ಉಲ್ಲಂಘಿಸುತ್ತಿವೆ. ನಾವು ಟ್ಯಾಕ್ಸಿ ಡ್ರೈವರ್ ಸಂಘದಿಂದ ಈ ಬಗ್ಗೆ ದೂರುಗಳನ್ನು ಪಡೆದಿದ್ದೇವೆ. ಈ ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆರ್‌ಟಿಒಗಳಿಗೆ ಸೂಚನೆ ನೀಡಿದ್ದೇವೆ. ಎಚ್‌ಎಸ್‌ಆರ್ ಲೇಔಟ್, ಕೆಆರ್ ಪುರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ, ದೇವನಹಳ್ಳಿ ಮತ್ತಿತರ ಪ್ರದೇಶಗಳಲ್ಲಿ ಕಾರ್ ಪೂಲಿಂಗ್ ಆ್ಯಪ್ ಮತ್ತು ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್‌ಟಿಒಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಸಿ ಹೇಳಿದ್ದಾರೆ.