90ರ ದಶಕದಲ್ಲಿ ಸಾಕಷ್ಟು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ಹಿರಿಯ ನಟಿ ಸವಿತಾ ಬಜಾಜ್ ತಾವು ಆರ್ಥಿಕ ಸಂಕಷ್ಟದಲ್ಲಿ ಇರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಸವಿತಾ ತಾವು ಅನಾರೋಗ್ಯದಿಂದ ಬಳಲುತ್ತಿರೋದ್ರ ಬಗ್ಗೆ ಹಾಗೂ ತಮ್ಮ ಉಳಿತಾಯದ ಹಣ ಯಾವ ರೀತಿಯಲ್ಲಿ ಖಾಲಿಯಾಗ್ತಿದೆ ಅನ್ನೋದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ಸವಿತಾ ಬಜಾಜ್, ನಾನು ಕೂಡಿಟ್ಟಿದ್ದ ಹಣವೆಲ್ಲವೂ ಖಾಲಿಯಾಗಿದೆ. ಅನಾರೋಗ್ಯದ ಕಾರಣದಿಂದಾಗಿ ನನ್ನೆಲ್ಲ ಹಣವನ್ನ ಚಿಕಿತ್ಸೆಗಾಗಿಯೇ ವ್ಯಯಿಸಿಬಿಟ್ಟಿದ್ದೇನೆ. ನಾನು ಉಸಿರಾಟ ಸಂಬಂಧಿ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆ, ಇನ್ಮುಂದೆ ನಾನು ಹೇಗೆ ಖರ್ಚನ್ನ ನಿಭಾಯಿಸಬೇಕು ಅನ್ನೋದೇ ನನಗೆ ತಿಳಿಯುತ್ತಿಲ್ಲ ಎಂದು ನೋವನ್ನ ತೋಡಿಕೊಂಡಿದ್ದಾರೆ.
2016ರಲ್ಲಿ ಅಪಘಾತವೊಂದರಿಂದ ನಾನು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಬರಹಗಾರರ ಸಂಘ ನನಗೆ ಆರ್ಥಿಕ ನೆರವು ನೀಡಿತ್ತು. ಅದೇ ರೀತಿ CINTAA ಕೂಡ 50 ಸಾವಿರ ರೂಪಾಯಿ ಧನಸಹಾಯ ಮಾಡಿತ್ತು. ಆದರೆ ಈಗ ನನ್ನ ಅನಾರೋಗ್ಯದಿಂದಾಗಿ ನನಗೆ ದುಡಿಯಲು ಆಗುತ್ತಿಲ್ಲ. ಎಲ್ಲರಿಗೂ ಹಣವನ್ನ ವಾಪಸ್ ಕೊಡಬೇಕು. ಇದಕ್ಕಾಗಿ ನಾನು ಪುನಃ ದುಡಿಯಲು ಆರಂಭಿಸಬೇಕು ಎಂಬ ಆಸೆ ನನ್ನಲ್ಲೂ ಇದೆ. ಆದರೆ ಅನಾರೋಗ್ಯದಿಂದಾಗಿ ಇದ್ಯಾವುದೂ ಸಾಧ್ಯವಾಗುತ್ತಿಲ್ಲ. ನನ್ನ ಆರೈಕೆ ಮಾಡಬೇಕಾದವರು ಯಾರೂ ಇಲ್ಲ. 25 ವರ್ಷಗಳ ಹಿಂದೆ ನಾನು ತವರೂರು ದೆಹಲಿಗೆ ಮರಳಲು ನಿರ್ಧರಿಸಿದೆ. ಆದರೆ ನನ್ನ ಕುಟುಂಬಸ್ಥರ್ಯಾರಿಗೂ ನಾನು ಬೇಡವಾಗಿದ್ದೆ. ನಾನು ಸಿಕ್ಕಾಪಟ್ಟೆ ಸಂಪಾದನೆ ಮಾಡಿದ್ದೆ. ಅನೇಕರಿಗೆ ಸಹಾಯವನ್ನೂ ಮಾಡಿದ್ದೆ. ಆದರೆ ಇಂದು ನನಗೆ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ನನ್ನಂತ ಬಡ ಕಲಾವಿದರಿಗಾಗಿ ಯಾರಾದರೂ ಒಂದು ವೃದ್ಧಾಶ್ರಮವನ್ನ ಆರಂಭಿಸಬೇಕು. ಇಷ್ಟೆಲ್ಲ ವರ್ಷ ಮುಂಬೈನ ಬಣ್ಣದ ಲೋಕದಲ್ಲಿ ಕೆಲಸ ಮಾಡಿದ್ದರೂ ಸಹ ನನಗೆ ಒಂದು ಮನೆಯನ್ನು ಖರೀದಿ ಮಾಡೋಕೆ ಸಾಧ್ಯವಾಗಲೇ ಇಲ್ಲ. ನಾನು ಅಡುಗೆ ಮನೆ ಹಾಗೂ 1 ಕೋಣೆಯನ್ನ ಹೊಂದಿರುವ ಪುಟ್ಟ ಮನೆಯಲ್ಲಿ ತಿಂಗಳಿಗೆ 7 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಿದ್ದೇನೆ. ನನಗೆ ಯಾರಿಂದಲೂ ಸಹಾಯ ಪಡೆಯೋದು ಇಷ್ಟವಿಲ್ಲ. ಆದರೆ ನನ್ನ ಪರಿಸ್ಥಿತಿ ಈ ರೀತಿ ಇದೆ ಎಂದು ಅಳಲು ತೋಡಿಕೊಂಡ್ರು.