ಫರಿದಾಬಾದ್‌ನ ಸೆಕ್ಟರ್-88ರ ಎಸ್‌ಆರ್‌ಎಸ್ ಹಿಲ್ಸ್ ಸೊಸೈಟಿಯಲ್ಲಿ 67 ವರ್ಷದ ವೃದ್ಧರೊಬ್ಬರು 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕುಬೇರ್ ನಾಥ್ ಶರ್ಮಾ ಎಂಬ ವೃದ್ಧ ಮಗ ಮತ್ತು ಸೊಸೆಯ ಕಿರುಕುಳಕ್ಕೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 22 ರಂದು ನಡೆದ ಈ ಘಟನೆಯಲ್ಲಿ, ವೃದ್ಧ ಕುಬೇರ್ ನಾಥ್ ಶರ್ಮಾ ಅವರು ಕಟ್ಟಡದ 5ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ, ಅವರ ಜೇಬಿನಲ್ಲಿ ಒಂದು ಸೂಸೈಡ್ ನೋಟ್ ಪತ್ತೆಯಾಗಿದೆ. ಆ ಪತ್ರದಲ್ಲಿ, ತಮ್ಮ ಮಗ ಮತ್ತು ಸೊಸೆಯೇ ಈ ಸಾವಿಗೆ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ.
ಭೂಪಾನಿ ಪೊಲೀಸರು ಈ ಸೂಸೈಡ್ ನೋಟ್ ಆಧರಿಸಿ, ಮಗ ಮತ್ತು ಸೊಸೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಫೋರ್‌ಮನ್ ಆಗಿ ನಿವೃತ್ತರಾಗಿದ್ದ ಶರ್ಮಾ ಅವರು ಕಳೆದ ಮೂರು ವರ್ಷಗಳಿಂದ ಫರಿದಾಬಾದ್‌ನ ಎಸ್‌ಆರ್‌ಎಸ್ ಹಿಲ್ಸ್ ಸೊಸೈಟಿಯಲ್ಲಿ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದರು.
ಶರ್ಮಾ ಅವರ ಮಗ ಗುರುಗ್ರಾಮ್‌ನ ಐಟಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರೆ, ಸೊಸೆ ಶಾಲಾ ಶಿಕ್ಷಕಿಯಾಗಿದ್ದಾರೆ. ಶರ್ಮಾ ಅವರ ಜೇಬಿನಲ್ಲಿ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ, “ನಾನು ಸ್ವಯಂ ಪ್ರೇರಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಯಾರೂ ನನ್ನನ್ನು ತಳ್ಳಿಲ್ಲ. ಮಗ ಮತ್ತು ಸೊಸೆ ಚಪ್ಪಲಿಯಿಂದ ಹೊಡೆದರೆ ಬದುಕುವುದಕ್ಕಿಂತ ಸಾಯುವುದೇ ಮೇಲು, ಇದರಲ್ಲಿ ಯಾರದ್ದೂ ತಪ್ಪಿಲ್ಲ. ಎಲ್ಲವೂ ದೇವರ ಇಚ್ಛೆ” ಎಂದು ಬರೆದಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿ ಮಗ ಮತ್ತು ಸೊಸೆಯನ್ನು ಪ್ರಾಥಮಿಕ ತನಿಖೆಯಲ್ಲಿ ವಿಚಾರಣೆ ನಡೆಸಲಾಗಿದೆ. ಫೆಬ್ರವರಿ 22 ರ ಘಟನೆ ನಂತರ, ಪೊಲೀಸರು ಅಪರಾಧ ನಡೆದ ಸ್ಥಳವನ್ನು ಮರುಸೃಷ್ಟಿಸಿ ಪ್ರಾಥಮಿಕ ಪ್ರಕರಣ ದಾಖಲಿಸಿದ್ದಾರೆ. ಶರ್ಮಾ ಅವರ ಜೇಬಿನಲ್ಲಿ ಪತ್ತೆಯಾದ ಸೂಸೈಡ್ ನೋಟನ್ನು ಕೈಬರಹದ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.