ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಾಮೂಲು. ಇದ್ರಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬ ಬಗ್ಗೆ ಸಿಇಒ ಒಬ್ಬರು ಸಲಹೆ ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಪರಾಸ್ ಚೋಪ್ರಾ, ಚೀನಾದ ಬೀಜಿಂಗ್‌ನಲ್ಲಿ ಕಾರ್ಯಗತಗೊಳಿಸುತ್ತಿರುವ ಐಡಿಯಾವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಸ್ಟಾರ್ಟಪ್ ಉತ್ಸಾಹಿಗಳಿಗೆ ಇದನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ಅವರ ಪೋಸ್ಟ್ ಪ್ರಕಾರ, ಬೀಜಿಂಗ್‌ನಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿರುವ ಜನರು, ಟ್ರಾಫಿಕ್ ನಿಂದ ಹೊರಗೆ ಬರಲು ಹಣ ನೀಡ್ತಾರೆ. ಹಣ ಪಡೆದವರು ಅವರನ್ನು ಟ್ರಾಫಿಕ್ ನಿಂದ ಹೊರಗೆ ಕರೆದುಕೊಂಡು ಹೋಗ್ತಾರೆ. ಅಂದ್ರೆ ನೀವು ಆ ಕಂಪನಿಗೆ ಕರೆ ಮಾಡಿದ್ರೆ ಕಂಪನಿ ಇಬ್ಬರು ಸಿಬ್ಬಂದಿ ಹಾಗೂ ಒಂದು ಬೈಕ್ ಕಳಿಸುತ್ತದೆ. ನೀವು ಬೈಕ್ ನಲ್ಲಿ ಮುಂದೆ ಹೋಗ್ಬಹುದು. ಒಬ್ಬ ಸಿಬ್ಬಂದಿ ನಿಮ್ಮ ಕಾರನ್ನು ಗಮ್ಯ ಸ್ಥಳಕ್ಕೆ ತಲುಪಿಸುತ್ತಾನೆ.
ಎಕ್ಸ್ ಖಾತೆಯಲ್ಲಿ ಸಿಇಒ ಈ ಐಡಿಯಾ ವೈರಲ್ ಆಗಿದೆ. ಆದ್ರೆ ಬಹುತೇಕರು ಇದು ಬೆಂಗಳೂರಿನಲ್ಲಿ ಸಾಧ್ಯವಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಬೈಕು ಸವಾರಿ ಮಾಡುವ ವ್ಯಕ್ತಿ, ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದಿದ್ದೇನೆ ಅಂತ ಇನ್ನೊಬ್ಬ ಬೈಕ್ ಸವಾರನಿಗೆ 100 ಡಾಲರ್ ನೀಡ್ತಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂಥದ್ದನ್ನು ನಾನು ಅನೇಕ ಬಾರಿ ಮಾಡಿದ್ದೇನೆ. ಇಲ್ಲಿ ಓಲಾ, ಉಬರ್ ಇದ್ದು, ಅದನ್ನು ಬಳಸಿಕೊಳ್ಳಿ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾನೆ. ಅಗತ್ಯವಿಲ್ಲ ಎಂದಾದ್ರೆ ಕಾರನ್ನು ಹೊರಗೆ ತೆಗೆಯಬಾರದು ಅಂತ ಒಬ್ಬರು ಹೇಳಿದ್ರೆ, ಈಗಾಗಲೇ ವಾಹನಗಳ ಸಂಖ್ಯೆ ಹೆಚ್ಚಿದ್ದು, ಇನ್ನು ಪರಿಹಾರಕ್ಕೆ ಅಂತ ಒಂದಿಷ್ಟು ವಾಹನ ಬಂದ್ರೆ ಕಷ್ಟ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.