ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶಾಕ್, ವಿದ್ಯುತ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
2024-25 ನೇ ಹಣಕಾಸು ವರ್ಷಕ್ಕೆ ಪ್ರತಿ ಯೂನಿಟ್ ಗೆ 49 ಪೈಸೆ ದರ ಪರಿಷ್ಕರಣೆ ಮಾಡುವ ಸಂಬಂಧ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ಖರೀದಿ ಮತ್ತು ವಿದ್ಯುತ್ ಸರಬರಾಜು ದರದ ನಡುವಿನ ಅಂತರ ಕಡಿಮೆ ಮಾಡಲು ವಿದ್ಯುತ್ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರತಿ ಯೂನಿಟ್ ಗೆ 49 ಪೈಸೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಕೋರಲಾಗಿದೆ ಎನ್ನಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ 50 ಪೈಸೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಅಕ್ಟೋಬರ್ ತಿಂಗಳಿಗೆ ಸೀಮಿತವಾಗಿ ಮತ್ತೆ 51 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಇದೀಗ ಮತ್ತೊಮ್ಮೆ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಗೃಹಜ್ಯೋತಿ ಯೋಜನೆ ಫಲಾನುಭವಿ ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯವಿದ್ದು, ಯೋಜನೆಯ ಫಲಾನುಭವಿಗಳಲ್ಲದ ಬಳಕೆದಾರರು, ವಾಣಿಜ್ಯ ಬಳಕೆದಾರರು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.