ಬೆಂಗಳೂರು: ತಾನು ಪೊಲೀಸ್ ಇನ್ಸ್ ಪೆಕ್ಟರ್ ಎಂದು ಹೇಳಿ ಕೆಐಡಿಬಿಯಿಂದ ರೈತರಿಗೆ ಹಣ ಕೊಡಿಸುತ್ತೇನೆ ಎಂದು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬೆಸ್ಕಾಂ ಸಹಾಯಕ ಇಂಜಿನಿಯರ್ ಓರ್ವರನ್ನು ಬೆಂಗಳೂರಿನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್ ಗಂಗಾಧರ್ ಬಂಧಿತ ಆರೋಪಿ. ಈತ ಕೆಐಎಡಿಬಿಯಿಂದ ರೈತರಿಗೆ ಹಣ ಕೊಡಿಸುವುದಾಗಿ ಹೇಳಿ ಕಮಿಷನ್ ಎಂದು ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದ. ಅಲ್ಲದೇ ತನ್ನ ರೆನಾಲ್ಟ್ ಕ್ವಿಡ್ ಕಾರಿಗೆ ಪೊಲೀಸ್ ಜಾಗೃತದಳದ ಬೋರ್ಡ್ ಅಳವಡಿಸಿದ್ದ. ಕಾರಿಗೆ ಪೊಲೀಸ್ ಜಾಗೃತದಳ ಬೋರ್ಡ್ ಅಳವಡಿಸಿದ ಕಾರಣಕ್ಕೆ ಈತನಿಗೆ ಹೆದ್ದಾರಿಯಲ್ಲಿ ಟೋಲ್ ಫ್ರೀ, ಪ್ರವಾಸಿ ತಾಣಗಳಲ್ಲಿ ವಿಐಪಿ ಆದ್ಯತೆ ನೀಡಲಾಗುತ್ತಿತ್ತು. ಪ್ರಶ್ನೆ ಮಾಡಿದವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಐಡಿ ತೋರಿಸುತ್ತಿದ್ದ. ಸಾಲದ್ದಕ್ಕೆ ಬೆಸ್ಕಾಂ ನೀಡಿದ್ದ ವಾಕಿಟಾಕಿಯನ್ನೂ ದುರ್ಬಳಕೆ ಮಾಡಿಕೊಂಡಿದ್ದ.
ಹಲವು ವರ್ಷಗಳಿಂದಲೂ ಇದೇ ರೀತಿ ಮೋಸ ಮಾಡಿಕೊಂಡು ಬಂದಿದ್ದ ಸಹಾಯಕ ಇಂಜಿನಿಯರ್ ಗಂಗಾಧರ್ ವಿರುದ್ಧ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೀಣ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.