ಬೆಂಗಳೂರು: ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳ ಎಡವಟ್ಟು ಆಗಾಗ ಜಗಜ್ಜಾಹೀರಾಗುತ್ತಲೇ ಇರುತ್ತದೆ. ಆದರೂ ಎಚ್ಚೆತ್ತುಕೊಳ್ಳಲ್ಲ. ಸಾಮಾನ್ಯವಾಗಿ ಒಂದು ಮನೆಗೆ ಕರೆಂಟ್ ಬಿಲ್ ತಿಂಗಳಿಗೆ ಸಾವಿರ ರೂಪಾಯಿ, ಎರಡು ಸಾವಿರ ಇಲ್ಲ ಮೂರು ಸಾವಿರ ರೂಪಾಯಿವರೆಗೂ ಬರಬಹುದು. ಅದೂ ಕೂಡ ಗೃಹ ಜ್ಯೋತಿ ಯೋಜನೆ ಜಾರಿಯಾದ ಬಳಿಕ ಬಹುತೇಕ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹೀಗಿರುವಾಗ ಇಲ್ಲೊಂದು ಮನೆಗೆ ಬೆಸ್ಕಾಂ ಸಿಬ್ಬಂದಿಗಳು ಒಂದು ತಿಂಗಳಿಗೆ 5.86 ಲಕ್ಷ ರೂ. ಬಿಲ್ ಕಳುಹಿಸಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರದ ಎಸ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿ ಪ್ರಸನ್ನ ಕುಮಾರ್ ಅಯ್ಯಂಗಾರ್ ಎಂಬುವವರಿಗೆ ಜುಲೈ ತಿಂಗಳ ವಿದ್ಯುತ್ ಬಿಲ್ 5,86,736 ರೂಪಾಯಿ ಬಂದಿದೆ. ಕರೆಂಟ್ ಬಿಲ್ ನೋಡಿದ ಪ್ರಸನ್ನ ಕುಮಾರ್ ಶಾಕ್ ಆಗಿದ್ದಾರೆ. ಒಂದು ತಿಂಗಳ ಕರೆಂಟ್ ಬಿಲ್ ಬರೋಬ್ಬರಿ 5 ಲಕ್ಷಕ್ಕೂ ಅಧಿಕ. ತಿಂಗಳ ಹಿಂದಷ್ಟೇ ಬಿಲ್ ಪಾವತಿಸಿದರೂ ಇಷ್ಟೊಂದು ಬಿಲ್ ಬರಲು ಕಾರಣವೇನೆಂದು ವಿಚಾರಿಸಿದರೆ ಬೆಸ್ಕಾಂ ಎಡವಟ್ಟು ಎಂಬುದು ಗೊತ್ತಾಗಿದೆ.
ಕರೆಂಟ್ ಬಿಲ್ ನೋಡಿ ಶಾಕ್ ಆಗಿದೆ ಎಂದಿರುವ ಪ್ರಸನ್ನ ಕುಮಾರ್, ನಮ್ಮ ಮನೆಯ ಟೆರೇಸ್ ಮೇಲೆ 3 ಕೆಬಿ ಸೋಲಾರ್ ಪ್ಯಾನಲ್ ಅಲವಡಿಸಿದ್ದೇನೆ. ಜೊತೆಗೆ 5 ಕೆಬಿ ಬ್ಯಾಟರಿ ಬ್ಯಾಕಪ್ ಇದೆ. ಹೀಗಾಗಿ ನಮಗೆ ಬೆಸ್ಕಾಂ ವಿದ್ಯುತ್ ಅಷ್ಟಾಗಿ ಬಳಕೆ ಮಾಡುವ ಅಗತ್ಯವೇ ಇಲ್ಲ. ನೂರು, ಇನ್ನೂರು ಬರುವ ಬಿಲ್ ಏಕಾಏಕಿ 5,86,736 ರೂಪಾಯಿ ಬಂದಿದೆ. ಬೆಸ್ಕಾಂ ನವರ ತಾಂತ್ರಿಕ ದೋಷದಿಂದ ಮನೆಯವವರು ತೊಂದರೆ ಅನುಭವಿಸುವಂತಾಗಿದೆ. ಬಿಲ್ ನೀಡುವ ಮೊದಲು ಸಿಬ್ಬಂದಿಗಳು ಪರಿಶೀಲಿಸಿಕೊಡಬೇಕು. ಈ ಬಗ್ಗೆ ಬೆಸ್ಕಾಂ ಗೆ ದೂರು ಕೊಡುತ್ತೇನೆ ಎಂದಿದ್ದಾರೆ.