ಜೀವನದ ಅತ್ಯಮೂಲ್ಯ ವಸ್ತುಗಳು ಹಾಳಾದರೆ ಮನಸ್ಸಿಗೆ ತುಂಬಾನೇ ನೋವಾಗುತ್ತೆ. ಅದನ್ನ ಸರಿ ಮಾಡಬೇಕು ಅಂತಾ ಯುಟ್ಯೂಬ್ ನೋಡಿದ್ರೂ ಯಾರ ಹತ್ತಿರ ಸಲಹೆ ಕೇಳಿದ್ರೂ ಕೆಲವೊಮ್ಮೆ ಪರಿಹಾರ ಸಿಗೋದಿಲ್ಲ. ಆದರೆ ಇನ್ಮೇಲೆ ನೀವು ಇಷ್ಟೊಂದು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಏಕೆಂದರೆ ಬೆಂಗಳೂರಿನಲ್ಲಿರುವ ಈ ರಿಪೇರಿ ಕೆಫೆಯು ನಿಮ್ಮೆಲ್ಲ ಸಮಸ್ಯೆಗಳಿಗೆ ಇರುವ ಏಕೈಕ ಸಲ್ಯೂಷನ್ ಆಗಿದೆ.
ನಿವೃತ್ತ ಇಂಜಿನಿಯರ್, ಶಿಕ್ಷಕರು ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ಹೊಂದಿರುವ ಯುವಜನತೆ ಒಂದಾಗಿ ಸ್ವಯಂಸೇವಕರಂತೆ ತಂಡ ಕಟ್ಟಿಕೊಂಡು ಈ ಅತ್ಯಮೂಲ್ಯ ಕಾರ್ಯವನ್ನ ಮಾಡುತ್ತಿದ್ದಾರೆ.
ಹಾಳಾದ ಪ್ರೆಶರ್ ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ತುಂಡಾದ ಆಭರಣಗಳು, ಹಾಳಾದ ಬೈಸಿಕಲ್, ಹಳೆ ರೇಡಿಯೋ ಅಥವಾ ಕೊಡೆ ಹೀಗೆ ನೀವು ಯಾವುದೇ ವಸ್ತುವನ್ನ ಕೊಟ್ಟರೂ ಸಹ ಅದು ಸರಿಯಾದ ಸ್ಥಿತಿಯಲ್ಲಿ ನಿಮ್ಮ ಕೈಗೆ ಸಿಗಲಿದೆ.
ಪೂರ್ಣಾ ಸಾಕಾರ್ ಎಂಬವರು ತಮ್ಮ ಸ್ನೇಹಿತರ ಸಹಾಯದಿಂದ 2015ರಿಂದ ಈ ವಿಶೇಷ ಕೆಲಸವನ್ನ ಮಾಡಿಕೊಂಡು ಬರ್ತಿದ್ದಾರೆ.
ಬಳಸಿ ಬಿಸಾಡುವ ಯುಗದಲ್ಲಿ ನಾವಿದ್ದೇವೆ. ರಿಪೇರಿ ಮಾಡುವವರನ್ನ ಹುಡುಕುವ ಗೋಜಿಗಿಂತ ಹಾಳಾದ ವಸ್ತುವನ್ನ ಬಿಸಾಡಿ ಹೊಸದನ್ನ ಖರೀದಿ ಮಾಡೋಣ ಎಂದು ಯೋಚಿಸುವವರ ಸಂಖ್ಯೆಯೇ ಹೆಚ್ಚಿದೆ. ಇಲ್ಲಿ ಬೆಲೆ ಮಾತ್ರ ಮುಖ್ಯವಾಗಲ್ಲ. ಜನರ ಮನಸ್ಥಿತಿ ಎಲ್ಲದಕ್ಕಿಂತ ಮುಖ್ಯವಾಗಿದೆ. ಈ ಮನಸ್ಥಿತಿಯಲ್ಲಿ ಬದಲಾಯಿಸಬೇಕು ಎಂದು ನಾವು ಈ ಹೊಸ ಪ್ರಯತ್ನ ಮಾಡಿದ್ದೇವೆ ಅಂತಾರೆ ಪೂರ್ಣಾ ಸಾಕಾರ್.