ಬೆಂಗಳೂರು : ರೈತನಿಗೆ ಅವಮಾನಿಸಿದ್ದ ಬೆಂಗಳೂರಿನ ಜಿ.ಟಿ ಮಾಲ್ ಕಳ್ಳಾಟ ಬಯಲಾಗಿದ್ದು, 2 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ.
2 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಜಿ.ಟಿ ಮಾಲ್ ಗೆ ಇದೀಗ ಬಿಬಿಎಂಪಿ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಪಂಚೆ ಉಟ್ಟು ಬಂದ ರೈತನಿಗೆ ಅವಮಾನ ಮಾಡಿದ ಜಿ.ಟಿ ಮಾಲ್ ಗೆ ಬಿಬಿಎಂಪಿ ಶಾಕ್ ನೀಡಿದೆ.
ಅಲ್ಲದೇ ರೈತನಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜಿ.ಟಿ ಮಾಲ್ 7 ದಿನ ಬಂದ್ ಆಗಲಿದೆ ಎಂದು ಸದನದಲ್ಲಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಘಟನೆ ಹಿನ್ನೆಲೆ
ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬುವರ ತಂದೆ ಮೂಲತಃ ರೈತರಾಗಿದ್ದು, ಬೆಂಗಳೂರಿಗೆ ಮಗನ ಮನೆ ( ನಾಗರಾಜ್) ಮನೆಗೆ ಬಂದಿದ್ದರು. ಅಂತೆಯೇ ತಂದೆಯನ್ನು ಸಿನಿಮಾ ನೋಡಲು ಮಗ ನಾಗರಾಜ್ ಜಿಟಿ ಮಾಲ್ ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ಉಟ್ಟಿದ್ದಾರೆಂಬ ಕಾರಣಕ್ಕೆ ಪ್ರವೇಶ ನಿರಾಕರಿಸಿದ್ದಾರೆ. ಎಷ್ಟೇ ವಾದ ಮಾಡಿದ್ರೂ ಭದ್ರತಾ ಸಿಬ್ಬಂದಿ ಮಾಲ್ ನ ಒಳಗೆ ಬಿಡಲಿಲ್ಲ. ಇದರಿಂದ ನೊಂದ ನಾಗರಾಜ್ ವಿಡಿಯೋ ಮಾಡಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶಗೊಂಡು ಮಾಲ್ ಗೆ ಮುತ್ತಿಗೆ ಹಾಕಿದ್ದಾರೆ. ನಂತರ ಮಾಲ್ ಕ್ಷಮೆಯಾಚಿಸಿದೆ.