ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳ ಗುಂಡೇಟಿಗೆ ಬಲಿಯಾಗಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಬಲೆಗೆ ಬೀಳದೇ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯನ್ನು ಇಂದು ಮಧ್ಯಾಹ್ನ ಸೆರೆಹಿಡಿಯಲಾಗಿತ್ತು. ಸೆರೆ ಸಿಕ್ಕ ಚಿರತೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟು ಹಾರಿಸಿದ್ದು, ಚಿರತೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಗುಂಡೇಟು ಚಿರತೆಗೆ ತಗುಲಿದೆ. ಗಾಯಗೊಂಡಿದ್ದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿರತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಕಳೆದೆ ಮೂರು ದಿನಗಳಿಂದಲೂ ಸಿಲಿಕಾನ್ ಸಿಟಿಯಲ್ಲಿ ಚಿರತೆ ಆತಂಕವುಂಟುಮಾಡಿದ್ದರೂ ಯಾರ ಮೇಲೂ ದಾಳಿ ಮಾಡಿರಲಿಲ್ಲ. ಆದರೆ ಬಲೆಗೆ ಬಿದ್ದ ಚಿರತೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟು ಹಾರಿಸಿದ್ದು, ಚಿರತೆ ಬಲಿಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.