ಬೆಂಗಳೂರು: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಳೆಯ ಕಟ್ಟಡಗಳು, ಹೋಟೆಲ್, ತಿಂಡಿ-ತಿನಿಸು, ಥಿಯೇಟರ್ ಗಳು ಎಲ್ಲವೂ ಹಳೆ ಕುರುಹುಗಳೂ ಇಲ್ಲದಂತೆ ಮಾಯವಾಗಿ ಬಿಡುತ್ತಿವೆ. ಅದರಲ್ಲೂ ಸಿಲಿಕಾನ್ ಸಿಟಿ, ರಾಜಧಾನಿ ಬೆಂಗಳೂರಿನಲ್ಲಿ ಈಗಿದ್ದ ಹೋಟೆಲ್ ಗಳು, ರಸ್ತೆಗಳ ಜಾಗದಲ್ಲಿ ಕೆಲದಿನಗಳಲ್ಲೇ ಬೃಹತ್ ಕಟ್ಟಡವೋ, ಮಾಲ್ ಗಳೋ ತಲೆ ಎತ್ತಿಬಿಡುತ್ತವೆ.
ಆಧುನಿಕ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ಬದಲಾಗುತ್ತಿರುತ್ತವೆ. ಮಲ್ಟಿಫ್ಲೆಕ್ಸ್ ಗಳ ಭರಾಟೆಗೆ ಹಳೇ ಥಿಯಟರ್ ಗಳೇ ಮಾಯವಾದವು. ಅದೇ ರೀತಿ ಈಗ ಹಳೆ ಹೋಟೆಲ್ ಗಳ ಜಾಗವನ್ನು ಹೊಸದೊಂದು ಕಟ್ಟಡ, ಆಭರಣ ಮಳಿಗಳು ಆವರಿಸಿಕೊಳ್ಳುತ್ತಿವೆ. ಇದೀಗ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನ್ಯೂ ಕೃಷ್ಣ ಭವನ್ ಹೋಟೆಲ್ ಕೆಲವೇ ದಿನಗಳಲ್ಲಿ ಬಾಗಿಲು ಮುಚ್ಚುತ್ತಿರುವುದು ಗ್ರಾಹಕರಿಗೆ ಬೇಸರ ತಂದಿದೆ.
ಮಲ್ಲೇಶ್ವರಂನ ಬಹಳ ಹಳೆಯ ಹಾಗೂ ಬಹುಜನಪ್ರಿಯ ತಿಂಡಿಗಳ ತಾಣ “ನ್ಯೂ ಕೃಷ್ಣ ಭವನ” ಡಿಸೆಂಬರ್ 6ನೇ ತಾರೀಖಿನಿಂದ ಮುಚ್ಚಲ್ಪಡುತ್ತದೆ.’ಅಸಾಧಾರಣ ತಿಂಡಿಗಳು’ ಎಂದು ಯಾರೂ ಕೇಳರಿಯದ ತಿಂಡಿಗಳನ್ನು ಮೊಟ್ಟ ಮೊದಲು ಪರಿಚಯಿಸಿದ ಹೆಮ್ಮೆ ಈ ಹೋಟೆಲಿನದ್ದು. ಆ ಸ್ಥಳದಲ್ಲಿ ಈಗ ಆಭರಣಗಳ ಮಳಿಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವು ವರ್ಷಗಳಿಂದ ಈ ಹೋಟೆಲ್ ನಲ್ಲಿ ವಿಶೇಷವಾದ ತಿಂಡಿ-ತಿನಿಸುಗಳನ್ನು ಸವಿಯುತ್ತಿದ್ದ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹಂಚಿಕೊಂಡಿದ್ದಾರೆ.
ಬಟನ್ ಇಡ್ಲಿ, ಗ್ರೀನ್ ಮಸಾಲಾ ಇಡ್ಲಿ, ಮಧುರೈ ಪೊಡಿ ಇಡ್ಲಿ, ಸೇಲಂ ಸಾಂಬಾರ್ ವಡಾ, ರಸಂ ಇಡ್ಲಿ, ಗೋಕಾಕ್ ಜೋಳದ ದೋಸೆ, ಮಂಗಳೂರು ನೀರು ದೋಸೆ, ಮಂಡ್ಯ ರಾಗಿ ದೋಸೆ, ಉಡುಪಿ ಗುಳ್ಳಪ್ಪ, ಗೊಬ್ಬಾ ಅವಲಕ್ಕಿ ಹೀಗೆ ಹತ್ತು ಹಲವು ಅಸಾಧಾರಣ ತಿಂಡಿಗಳು ಈ ಹೋಟೆಲ್ ನಲ್ಲಿ ಸಿಗುತ್ತಿದ್ದವು. ಈಗ ಹೋಟೆಲ್ ಮುಚ್ಚಿದರೆ ಈ ಎಲ್ಲಾ ತಿಂಡಿಗಳು, ರುಚಿ ಬೇರೆಲ್ಲೂ ಸಿಗುವುದಿಲ್ಲವಲ್ಲ ಎಂಬುದು ಗ್ರಾಹಕರ ನೋವು.