ಬೆಂಗಳೂರು: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬೊಬ್ಬರೇ ಓಡಾಡದಂತೆ ಸೂಚಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು ಸಿಂಗಸಂದ್ರ ಬಳಿ ಬಡಾವಣೆಗಳ ರಸ್ತೆಯಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಹೆಚ್.ಎಸ್.ಆರ್ ಲೇಔಟ್ ಸೇರಿದಂತೆ ಸುತಮುತ್ತಲ ಜನರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ.
ಕೆ.ಆರ್.ಪುರಂ ವಲಯ ಅರಣ್ಯ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಶೋಧಕಾರ್ಯಾಚರಣೆ ನಡೆಸಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಬೊಮ್ಮನಹಳ್ಳಿ, ಹೆಚ್.ಎಸ್.ಆರ್.ಲೇಔಟ್, ಬಿಟಿಎಂ ಲೇಔಟ್ ಗಳಲ್ಲಿ ರಾತ್ರಿ ವೇಳೆ ಒಬ್ಬೊಬ್ಬರೇ ಓಡಾಡದಂತೆ ಹಾಗೂ ಅನಿವಾರ್ಯವಿದ್ದರೆ ಕಾರಿನಲ್ಲಿ ಓಡಾಡುವಂತೆ ಮೈಕ್ ಗಳಲ್ಲಿ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ.