ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಮತ್ತೆ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಜ್ವರ ಬಿಟ್ಟು ಮತ್ತೆ ಮೂರು ದಿನಕ್ಕೆ ಮತ್ತೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಈ ರೀತಿ ಜ್ವರ ಕಂಡುಬಂದ ಬಹುತೇಕರಲ್ಲಿ ಡೆಂಗ್ಯೂ ಪತ್ತೆಯಾಗಿದೆ.
ಕಳೆದ 30 ದಿನಗಳಲ್ಲಿ ರಾಜಧಾನಿಯಲ್ಲಿ ಬರೋಬ್ಬರಿ 2970 ಹೊಸ ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಇದು ಕಳೆದ ಮೂರುವರ್ಷಗಳಲ್ಲಿಯೇ ಪತ್ತೆಯಾದ ಗರಿಷ್ಠ ಪ್ರಕರಣವಾಗಿದೆ. ಕಳೆದ ತಿಂಗಳು ಕೊಂಚ ಕಡಿಮೆಯಾಗಿದ್ದ ಡೆಂಗ್ಯೂ ಕೇಸ್ ಈ ಬಾರಿ ಮತ್ತೆ ಏರಿಕೆಯಾಗಿದೆ.
ಈ ವರ್ಷ ಜನವರಿಂದ ಈವರೆಗೆ 7228 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದು ಆರೋಗ್ಯ ಇಲಾಖೆಯಲ್ಲಿಯೇ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.