ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಪಟಾಕಿಯಿಂದಾಗಿ ವಾಯುಮಾಲಿನ್ಯ ಏರಿಕೆಯಾಗಿದೆ. ಈದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದ್ದು, ಆತಂಕ ಎದುರಾಗಿದೆ.
ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಜನರು ಭಾರಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದರಿಂದಾಗಿ ದೀಪಾವಳಿ ಹಬ್ಬದ ಎರಡನೇ ದಿನ ವಾಯುಮಾಲಿನ್ಯ ಪ್ರಮಾಣ ಅತ್ಯಧಿಕವಾಗಿ ಹೆಚ್ಚಿದೆ. ಒಂದೆಡೆ ಚಳಿ, ಇನ್ನೊಂದೆಡೆ ವಾಯುಗುಣಮಟ್ಟ ಸೂಚ್ಯಂಕ ಗಂಭೀರ ಸ್ಥಿತಿ ತಲುಪಿದ್ದು ಉಸಿರಾಟದ ಸಮಸ್ಯೆ, ಅಸ್ತಮಾ, ಕೆಮ್ಮುಗಳಿಂದ ಬಳಲುತ್ತಿರುವವರಿಗೆ ಮಾಲಿನ್ಯ ವಿಷವಾಗಬಹುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ಸದ್ಯ ಬೆಂಗಳೂರಿನ ವಾಯುಗುಣಮಟ್ಟ (AQI) 100ರ ಗಡಿ ದಾಟಿದೆ. ಹೆಬ್ಬಾಳದಲ್ಲಿ ಹಬ್ಬದ ಬಳಿಕ ವಾಯುಮಾಲಿನ್ಯ ಗುಣಮಟ್ಟ 176 ದಾಟಿದೆ.
ಜಯನಗರದಲ್ಲಿ 105-228ಕ್ಕೆ ಏರಿಕೆಯಾಗಿದೆ. ನಿಮ್ಯಾನ್ಸ್ ಆಸ್ಪತ್ರೆ ಬಳಿ 51 ರಿಂದ 179ಕ್ಕೆ ಏರಿಕೆಯಾಗಿದೆ.
ಮೆಜೆಸ್ಟಿಕ್ ನಲ್ಲಿ 69 ರಿಂದ 101ಕ್ಕೆ ಏರಿಕೆಯಾಗಿದೆ. ಪೀಣ್ಯದಲ್ಲಿ 108ಕ್ಕೆ ಏರಿಕೆಯಾಗಿದೆ. ಮೈಲಸಂಧ್ರದಲ್ಲಿ 187ಕ್ಕೆ ಏರಿಕೆಯಾಗಿದೆ. ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಕ್ಕಳು, ವಯಸ್ಕರರು, ಉಸಿರಾಟದ ಸಮಸ್ಯೆಯಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.