ಬೆಂಗಳೂರು: ರಾಜಧಾನಿ ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಆತಂಕಕ್ಕೀಡಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆಲ ಶಾಲೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರ, ಯಲಹಂಕ, ಸದಾಶಿವನಗರ ಸೇರಿದಂತೆ 15 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಹಾಕಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿ ನೋಡುತ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸದಾಶಿವನಗರದ ನೀವ್ ಅಕಾಡೆಮಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ನನಗೂ ಒಂದು ಕ್ಷಣ ಗಾಬರಿಯಾಯಿತು. ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ. ಯಾರು ಕೂಡ ಆತಂಕಪಡುವ ಅಗತ್ಯವಿಲ್ಲ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕರೆಯಾಗಿದೆ. ಆದರೂ ಯಾವ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬುದನ್ನು ತನಿಖೆ ನಡೆಸಲಾಗುವುದು.
ಬೆಂಗಳೂರು ನಾಗರಿಕರಲ್ಲಿ ನನ್ನ ವಿನಂತಿ. ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ. ಶಾಲೆಗಳಿಗೆ ಎಲ್ಲಾ ಭದ್ರತೆ ಕಲ್ಪಿಸಲಾಗುವುದು. ಮಕ್ಕಳು, ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.