ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಮೆಟ್ರೋ, ಮಾಲ್ ಸೇರಿದಂತೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.
ಇಲ್ಲೋರ್ವ ಯುವಕ ಹೋಟೆಲ್ ಗೆ ಬಂದಿದ್ದ ಯುವತಿಯನ್ನು ಹಿಂದಿನಿಂದ ಬಂದು ಟಚ್ ಮಾಡಿ ಅಸಭ್ಯವಾಗಿ ವರ್ತಿಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ವಿಜಯನಗರ ನಮ್ಮೂಟ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.
ಮೂವರು ಯುವಕರ ಗುಂಪು ಹೋಟೆಲ್ ಗೆ ಬಂದಿದ್ದು, ಯುವತಿಯರು ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಿಕೃತಿ ಮೆರೆಯುತ್ತಿರುವುದು ಬೆಳಕಿಗೆ ಬಂದಿದೆ. ಮೂವರು ಯುವಕರು ಮೊದಲು ಹೋಟೆಲ್ ನಲ್ಲಿ ಪ್ಲಾನ್ ಮಾಡಿಕೊಂಡಿದ್ದಾರೆ. ಹೋಟೆಲ್ ಗೆ ಬಂದಿದ್ದ ಯುವತಿ ಕೌಂಟರ್ ಬಳಿ ನಿಂತು ತಿಂಡಿ ಆರ್ಡರ್ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾಮುಕ ಆಕೆಯನ್ನು ಟಚ್ ಮಾಡಿ ವಿಲಕ್ಷಣವಾಗಿ ವರ್ತಿಸಿದ್ದಾನೆ. ಈ ದೃಶ್ಯ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಿಜಯನಗರ ಪೊಲೀಸರು ಕಾಮುಕನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಅಲ್ಲದೇ ಆರೋಪಿ ಹಾಗೂ ಯುವಕರ ಗುಂಪಿಗಾಗಿ ಹುಡುಕಾಟ ನಡೆಸಿದ್ದಾರೆ.