ಬೆಂಗಳೂರು : ಕಟಾಕಟ್ ಬಳಿಕ ಮೋದಿಯ 3000 ಹಣಕ್ಕಾಗಿ ಪೋಸ್ಟ್ ಆಫೀಸ್ ಮುಂದೆ ಮಹಿಳೆಯರು ಕ್ಯೂ ನಿಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8,500 ರೂಪಾಯಿ ವರ್ಷಕ್ಕೆ 1 ಲಕ್ಷ ಜಮೆ ಆಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದರು. ಇದನ್ನೇ ತಪ್ಪಾಗಿ ಭಾವಿಸಿದ ಮಹಿಳೆಯರು ಅಂಚೆ ಕಚೇರಿಗೆ ತೆರಳಿ ಐಪಿಪಿಬಿ ಖಾತೆ ತೆರೆಯಲು ಮುಗಿಬಿದ್ದಿದ್ದರು. ಇದೀಗ ಮಹಿಳೆಯರು ಮೋದಿ 3000 ಸಾವಿರ ಹಣ ಹಾಕುತ್ತಾರೆ ಎಂಬ ವದಂತಿಗೆ ಕಿವಿಗೊಟ್ಟು ಅಕೌಂಟ್ ಮಾಡಿಸಲು ಪೋಸ್ಟ್ ಆಫೀಸ್ ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಅಲ್ಲದೇ ಪೋಸ್ಟ್ ಆಫೀಸ್ ಗೆ ದಾಂಗುಡಿ ಇಡುತ್ತಿರುವ ಮಹಿಳೆಯರು ಪ್ರಧಾನಿ ಮೋದಿಯ ಸ್ಕೀಮ್ ಗಳ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟ್ ಆಫೀಸ್ ಗೆ ಲಗ್ಗೆ ಇಡುತ್ತಿರುವ ಹಿನ್ನೆಲೆ ಪೋಸ್ಟ್ ಆಫೀಸ್ ಸಿಬ್ಬಂದಿಗಳು ಉತ್ತರ ಕೊಟ್ಟು ಹೈರಾಣಾಗಿದ್ದಾರೆ. ಬಂದವರನ್ನು ವಾಪಸ್ ಕಳಿಸದ ಸಿಬ್ಬಂದಿಗಳು ಅಕೌಂಟ್ ಮಾಡಿಸಿ ಕಳುಹಿಸುತ್ತಿದ್ದಾರೆ, ಅಲ್ಲದೇ ಸರ್ಕಾರದ ಯಾವುದೇ ಸ್ಕೀಮ್ ಬಂದರೂ ನಾವು ಹೇಳುತ್ತೇವೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅಂಚೆ ಕಚೇರಿ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.