ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರ ಠಾಣೆ ಪೊಲೀಸರು ಅಸ್ಸಾಂ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.
ಉಜ್ಬೇಕಿಸ್ತಾನದ ಜರಿನಾ ಅವರು ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ಶೇಷಾದ್ರಿಪುರಂ ಹೋಟೆಲ್ ನಲ್ಲಿ ತಂಗಿದ್ದರು. ಬುಧವಾರ ಸಂಜೆಯಿಂದ ಹೋಟೆಲ್ ಸಿಬ್ಬಂದಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಮಾಸ್ಟರ್ ಕೀ ಬಳಸಿ ರೂಮಿನ ಬಾಗಿಲು ತೆರೆದಾಗ ಅನುಮಾನಾಸ್ಪದವಾಗಿ ಜರಿನಾ ಮೃತಪಟ್ಟಿರುವುದು ಕಂಡುಬಂದಿತ್ತು.
ಶೇಷಾದ್ರಿಪುರಂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ರೂಂ ಸರ್ವಿಸ್ ಗೆ ಹೋಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಜರಿನಾರನ್ನು ಹತ್ಯೆ ಮಾಡಿ ಆಕೆಯ ಬಳಿ ಇದ್ದ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದರು. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ಕರೆತಂದಿದ್ದು, ತನಿಖೆ ಮುಂದುವರೆಸಿದ್ದಾರೆ.