2004ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರಿಗೆ ಎರಡು ದಶಕಗಳ ಬಳಿಕ ನ್ಯಾಯ ಸಿಕ್ಕಿದೆ. ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಮರೆತು ಈ ಮಹಿಳೆಯ ದೇಹದಲ್ಲಿ 3.2 cm ಉದ್ದದ ಸರ್ಜಿಕಲ್ ಸೂಜಿಯನ್ನು ಮರೆತುಬಿಟ್ಟಿದ್ದು, ಇದರ ಪರಿಣಾಮವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದ ಮಹಿಳೆಗೆ ಈಗ 5 ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ.
ಪ್ರಕರಣದ ವಿವರ: ಬೆಂಗಳೂರಿನ ಜಯನಗರ ನಿವಾಸಿ ಪದ್ಮಾವತಿ ಎಂಬವರು 2004ರಲ್ಲಿ ಖಾಸಗಿ ಆಸ್ಪತ್ರೆ ಒಂದರಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಡಿಸ್ಚಾರ್ಜ್ ಆಗಿದ್ದ ಅವರಿಗೆ ಪದೇ ಪದೇ ಹೊಟ್ಟೆ ನೋವು ಹಾಗೂ ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು.
ಮತ್ತೆ ಅದೇ ವೈದ್ಯರ ಬಳಿ ಹೋದ ಮೇಲೆ ಶಸ್ತ್ರ ಚಿಕಿತ್ಸೆ ಬಳಿಕ ಇದು ಸಾಮಾನ್ಯ ಸಂಗತಿ ಎಂದು ಹೇಳಿ ನೋವು ನಿವಾರಕ ಮಾತ್ರೆಗಳನ್ನು ನೀಡಲಾಗಿತ್ತು. ಇಷ್ಟಾದರೂ ಸಹ ಪದ್ಮಾವತಿಯವರ ನೋವು ಕಡಿಮೆಯಾಗಿರಲಿಲ್ಲ. ಇದರಿಂದ ಬೇಸತ್ತ ಅವರು 2010ರಲ್ಲಿ ಮತ್ತೊಂದು ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದು, ಈ ವೇಳೆ ದೇಹದಲ್ಲಿ ಸೂಜಿ ಹಾಗೆ ಇರುವುದು ಕಂಡುಬಂದಿತ್ತು.
ನಂತರ ಆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಸೂಜಿಯನ್ನು ತೆಗೆಯಲಾಗಿದ್ದು, ಬಳಿಕ ಪದ್ಮಾವತಿಯವರು ತಮಗೆ ಮೊದಲು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದ ಆಸ್ಪತ್ರೆ ವಿರುದ್ಧ ಗ್ರಾಹಕ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಕಾನೂನು ವೆಚ್ಚವಾಗಿ 50,000 ರೂಪಾಯಿ ಹಾಗೂ ಮಾನಸಿಕ ಹಾಗೂ ದೈಹಿಕ ನೋವಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿಗಳನ್ನು ನೀಡುವಂತೆ ಆದೇಶಿಸಿದೆ.