ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಅಪಘಾತಗಳು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡಿಸೆಂಬರ್ 31 ರಂದು ರಾತ್ರಿ 11 ರಿಂದ ಜನವರಿ 1ರ ಬೆಳಗ್ಗೆ 6ರ ವರೆಗೆ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ(ಕೆಐಎ ವಿಮಾನ ನಿಲ್ದಾಣಕ್ಕೆ ಹೋಗುವ ಎಲಿವೇಟೆಡ್ ಎಕ್ಸ್ ಪ್ರೆಸ್‌ವೇ ಹೊರತುಪಡಿಸಿ) ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ವಿಮಾನ ನಿಲ್ದಾಣದ ಎಲಿವೇಟೆಡ್ ಎಕ್ಸ್ ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಡಿಸೆಂಬರ್ 31ರ ರಾತ್ರಿ 10 ರಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೂ ನಿರ್ಬಂಧಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ತಿಳಿಸಿದ್ದಾರೆ.