ಕರ್ನಾಟಕದಲ್ಲಿ ಹಿಜಾಬ್ ವಿವಾದ ಇನ್ನೂ ಅಂತ್ಯವಾಗಿಲ್ಲ,ಈ ಸಂಬಂಧ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಈಗಾಗ್ಲೇ ಕೋರ್ಟ್ ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿ ಶಾಲಾ-ಕಾಲೇಜಿಗೆ ಸಮವಸ್ತ್ರ ಧರಿಸಬೇಕು ಎಂದು ಸೂಚಿಸಿದೆ.
ಇದನ್ನು ವಿರೋಧಿಸಿ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗದೆ ಈಗಲೂ ಕಾಲೇಜಿನಿಂದ ದೂರ ಉಳಿದಿದ್ದಾರೆ. ಹೀಗಿರುವಾಗ ಸಿಲಿಕಾನ್ ಸಿಟಿಯಲ್ಲಿ ಟರ್ಬನ್ ಜಟಾಪಟಿ ಶುರುವಾಗಿದ್ದು, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಹಿಜಾಬ್ VS ಟರ್ಬನ್ ಫೈಟ್ ನಡೆಯುತ್ತಿದೆ. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಹಿಜಾಬ್ ಗೆ ಅವಕಾಶ ಇಲ್ಲ ಅಂದ್ರೆ ಟರ್ಬನ್ ಯಾಕೆ ಅಂತಾ ಕಾಲೇಜು ಆಡಳಿತ ಮಂಡಳಿಗೆ ಪ್ರಶ್ನಿಸಿದ್ದಾರೆ.
ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಮೊದಲಿನಿಂದಲೂ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ಗೆ ಅವಕಾಶ ಇರಲಿಲ್ಲ. ಆದರೆ ಕೋರ್ಟ್ ಆದೇಶದ ಬೆನ್ನಲ್ಲೇ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು, ಕೋರ್ಟ್ ಆದೇಶದಲ್ಲಿ ಧರ್ಮಸೂಚಕ ವಸ್ತ್ರಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗಿದೆ. ಹೀಗಿರುವಾಗ ಹಿಜಾಬ್ ಗಿಲ್ಲದ ಅವಕಾಶ ಟರ್ಬನ್ಗೆ ಏಕೆ ಎಂದು ಪ್ರಶ್ನಿಸಿದ್ದಾರೆ. ಅಂದಹಾಗೇ ಟರ್ಬನ್ ಧರಿಸುವ ವಿದ್ಯಾರ್ಥಿನಿ, ಆ ಕಾಲೇಜಿನ ಯೂನಿಯನ್ ಪ್ರೆಸಿಡೆಂಟ್. ಇದನ್ನು ಪ್ರಶ್ನಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರು ನಮ್ಮ ಕಾಲೇಜು ವಿದ್ಯಾರ್ಥಿನಿಯರ ಯೂನಿಯನ್ ಅಧ್ಯಕ್ಷೆ ಟರ್ಬನ್ ಧರಿಸುತ್ತಾರೆ. ಟರ್ಬನ್ ಹಾಕಲು ಅವರಿಗೆ ಯಾಕೆ ಅವಕಾಶ ನೀಡಲಾಗಿದೆ ಮೇಡಂ ಅಂತಾ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮೌಂಟ್ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲ್, ವಿದ್ಯಾರ್ಥಿನಿಯರು ಟರ್ಬನ್ ಪ್ರಶ್ನೆ ಕೇಳಿದ ಬಳಿಕ, ಟರ್ಬನ್ ಧರಿಸುತ್ತಿದ್ದ ಕಾಲೇಜು ಯೂನಿಯನ್ ಅಧ್ಯಕ್ಷೆಯನ್ನ ಕರೆದು ಮಾಹಿತಿ ಪಡೆಯಲಾಗಿದೆ. ಟರ್ಬನ್ ತಗೆಯುವಂತೆ ಕಾಲೇಜು ಆಡಳಿತ ಮಂಡಳಿ ಹೇಳಿಲ್ಲ, ಟರ್ಬನ್ ತೆಗೆಯಲು ಸಾಧ್ಯತೆ ಇದೆಯಾ ಅಂತಾ ಕೇಳಿದ್ವಿ, ಆದರೆ ವಿದ್ಯಾರ್ಥಿನಿ ಟರ್ಬನ್ ನಮ್ಮಲ್ಲಿ ಕಡ್ಡಾಯ ಅಂತಾ ಹೇಳಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಇದೇ ಮಾತನ್ನ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಾದ ಬಳಿಕ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರ ಪೋಷಕರು ಈ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಕಾಲೇಜಿನ ಮಂಡಳಿ, ನಾವು ಕೋರ್ಟ್ ಆದೇಶ ಹಾಗೂ ಶಿಕ್ಷಣ ಇಲಾಖೆಯ ಆದೇಶವನ್ನು ಪಾಲನೆ ಮಾಡ್ತ ಇದ್ದೀವಿ. ಸ್ಥಳೀಯ ಡಿಡಿಪಿಐ ಶ್ರೀರಾಮ್ ಅವರು, ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಜೊತೆ ಚರ್ಚೆ ಮಾಡಿ ಮನವರಿಕೆ ಮಾಡಿದ್ದಾರೆ. ಸದ್ಯ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರ್ತಿದ್ದಾರೆ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದೆ.