ಬೆಂಗಳೂರು: ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಾಕು, ರಸ್ತೆ ತುಂಬಾ ನೀರು ನಿಂತು ಕೆರೆಯಂತಾಗುತ್ತದೆ. ವಾಹನ ಸವಾರರು ಬಹಳ ಕಷ್ಟಪಟ್ಟು ಸಂಚರಿಸಬೇಕಾಗುತ್ತದೆ. ಇದೀಗ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ.
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಒಬ್ಬರು ತಮ್ಮ ಕೈಯಿಂದಲೇ ಮುಚ್ಚಿಹೋಗಿದ್ದ ಚರಂಡಿಯನ್ನು ಸ್ವಚ್ಛಗೊಳಿಸುವ ಮೂಲಕ ಕರ್ತವ್ಯದ ಮಿತಿ ಮೀರಿ ನಡೆದುಕೊಂಡಿದ್ದಾರೆ. ರಸ್ತೆ ಸ್ವಚ್ಛಗೊಳಿಸುವವರು ಮತ್ತು ಇತರ ಸಿಬ್ಬಂದಿಗೆ ಕಾಯದೆ, ಸಂಚಾರಿ ಅಧಿಕಾರಿ ಸ್ವಯಂಪ್ರೇರಿತರಾಗಿ ಚರಂಡಿಯಲ್ಲಿ ಸಂಗ್ರಹವಾದ ಕಸವನ್ನು ಸ್ವಚ್ಛಗೊಳಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು, ಟ್ರಾಫಿಕ್ ಪೊಲೀಸ್ ಜಗದೀಶ್ ರೆಡ್ಡಿಯನ್ನು ಶ್ಲಾಘಿಸಿದ್ದಾರೆ. ಅಗತ್ಯವಿರುವ ಸಮಯದಲ್ಲಿ ಅವರ ಸಹಾಯವು ಅವರ ಕರ್ತವ್ಯದ ಉತ್ಸಾಹ ಮತ್ತು ಭಕ್ತಿಯನ್ನು ಹೇಗೆ ತೋರಿಸುತ್ತದೆ ಎಂಬ ಬಗ್ಗೆ ಗಮನ ಸೆಳೆದಿದ್ದಾರೆ.
ಈ ವಿಡಿಯೋವನ್ನು ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಂಚಾರಿ ಅಧಿಕಾರಿಯ ಸೇವೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ, ಹೀರೋ ಎಂದು ಕೊಂಡಾಡಿದ್ದಾರೆ.
ಅಂದಹಾಗೆ ರಾಜ್ಯದ ರಾಜಧಾನಿಯು ವಾರಾಂತ್ಯದಲ್ಲಿ ನಿರಂತರ ಮಳೆಗೆ ಸಾಕ್ಷಿಯಾಯಿತು. ಮಳೆ ಪರಿಣಾಮ ಮೂವರು ಸಾವನ್ನಪ್ಪಿದ್ದು, 75 ಕ್ಕೂ ಹೆಚ್ಚು ವಾಹನಗಳನ್ನು ಹಾನಿಗೊಳಗಾಗಿವೆ. ಭಾರಿ ಮಳೆಯಿಂದ ಪ್ರಮುಖ ವಸತಿ ಪ್ರದೇಶಗಳಿಗೆ ನೀರು ನುಗ್ಗಿ, ಜನರಿಗೆ ತೊಂದರೆಯನ್ನುಂಟು ಮಾಡಿತು.