ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ತಪ್ಪಿಸಲು ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಶಾಲೆ ಹಾಗೂ ಕೈಗಾರಿಕೆಗಳ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಗೆ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಸಂಬಂಧಪಟ್ಟವರೊಂದಿಗಿನ ಸಮಾಲೋಚನೆಯ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿದೆ. ಮಕ್ಕಳನ್ನು ನಿದ್ದೆಯಿಂದ ಬೇಗ ಎಚ್ಚರಿಸಿದರೆ ನಿದ್ರಾಹೀನತೆಯ ಸಮಸ್ಯೆ ಎದುರಾಗುತ್ತದೆ. ಆರೋಗ್ಯಕರ ಉಪಹಾರ ಸೇವನೆಗೂ ಸಮಯ ಸಿಗದಂತಾಗುತ್ತದೆ. ಶಾಲೆಗಳ ಬಳಿ ದಟ್ಟಣೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಲಾಗಿದೆ.
ಕೈಗಾರಿಕೆಗಳ ಸಮಯ ಬದಲಾವಣೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ. ಶಿಫ್ಟ್ ಗಳಲ್ಲಿ ಕಾರ್ಮಿಕರು ಕೆಲಸ ಮಾಡುವುದರಿಂದ ದಟ್ಟಣೆಗೆ ಕಾರಣವಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಯ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದಿದ್ದು, ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಹೈಕೋರ್ಟ್ ಮುಂದೂಡಿದೆ. ಸಮರ್ಪಣಾ ಸಾಂಸ್ಕೃತಿಕ ಸೇವಾ ಸಂಸ್ಥೆ ಪಿಐಎಲ್ ಸಲ್ಲಿಸಿತ್ತು.