ಎರಡು ತಿಂಗಳ ಹಿಂದೆ ವಿದೇಶಿ ಪ್ರಜೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಬೆಂಗಳೂರು ಪೊಲೀಸರು ಚೋರ್ ಬಜಾರ್ ನಲ್ಲಿ ವ್ಯಾಪಾರಿಯನ್ನು ಬಂಧಿಸಿದ್ದಾರೆ.
ಭಾರತದಾದ್ಯಂತ ಪ್ರಯಾಣಿಸುತ್ತಿದ್ದ ಡಚ್ ಪ್ರಜೆಯಾದ ಯೂಟ್ಯೂಬರ್ ಪೆಡ್ರೊ ಮೋಟಾ ಅವರು ವೀಡಿಯೊ ಬ್ಲಾಗ್ ಅನ್ನು ಚಿತ್ರೀಕರಿಸುವಾಗ ಬೆಂಗಳೂರಿನ ಚಿಕ್ಕಪೇಟೆ ಬಳಿ ಸ್ಥಳೀಯ ವ್ಯಾಪಾರಿಯಿಂದ ಹಲ್ಲೆಗೊಳಗಾಗಿದ್ದರು.
ಪೆಡ್ರೊ ಮೋಟಾ ಅವರ ರೆಕಾರ್ಡಿಂಗ್ ಸಾಧನದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅನುಚಿತವಾಗಿ ವರ್ತಿಸಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಈ ವಿಡಿಯೋವನ್ನ ರಿ ಟ್ವೀಟ್ ಮಾಡಿದ ಬೆಂಗಳೂರು ಪೊಲೀಸರು, ಈ ಬಗ್ಗೆ ಕ್ರಮ ಕೈಗೊಂಡು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪ್ರವಾಸಿಗರೊಂದಿಗೆ ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಮಾರುಕಟ್ಟೆಯಲ್ಲಿ ಯೂಟ್ಯೂಬರ್ ಸೆಲ್ಫಿ ವೀಡಿಯೊವನ್ನು ಶೂಟ್ ಮಾಡುವಾಗ ವ್ಯಕ್ತಿಯೊಬ್ಬ ರೆಕಾರ್ಡಿಂಗ್ ಮಾಡುವುದನ್ನ ಆಕ್ಷೇಪಿಸಿ, ಯೂಟ್ಯೂಬರ್ ನ ಕೈ ಹಿಡಿದು ಅನುಚಿತವಾಗಿ ವರ್ತಿಸಿದ್ದ.
ಕರ್ನಾಟಕ ಪೊಲೀಸ್ ಮೂಲಗಳ ಪ್ರಕಾರ ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಅಂದಿನಿಂದ ವಿದೇಶಿಗ ವ್ಲಾಗರ್ ದೇಶ ತೊರೆದಿದ್ದಾರೆ.
ಪೊಲೀಸರು ನವಾಬ್ ಹಯಾತ್ ಷರೀಫ್ ಎಂದು ಗುರುತಿಸಲಾದ ವ್ಯಾಪಾರಿಯನ್ನು ಬಂಧಿಸಿದ್ದು ಆತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 92 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.