ಬೆಂಗಳೂರು : ‘ಚಿಕನ್’ ಇಲ್ಲದ ‘ಬಿರಿಯಾನಿ’ ಕೊಟ್ಟ ಹೋಟೆಲ್ ಮಾಲೀಕನಿಗೆ ಕೋರ್ಟ್ ಶಾಕ್ ನೀಡಿದ್ದು, 1000 ರೂ. ದಂಡ ವಿಧಿಸಿದೆ. ವಿಚಿತ್ರ ಪ್ರಕರಣವಾದರೂ ಇದು ಸತ್ಯ. ಏನಿದು ಘಟನೆ ಮುಂದೆ ಓದಿ.
ಏಪ್ರಿಲ್ 2 2023 ರಲ್ಲಿ ನಾಗರಭಾವಿ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಅಡುಗೆ ಸಿಲಿಂಡರ್ ಖಾಲಿ ಆಗಿದೆ. ಆದ್ದರಿಂದ ಹೊರಗಡೆ ಊಟ ಮಾಡೋಣ ಎಂದು ದಂಪತಿಗಳು ಐಟಿಐ ಲೇಔಟ್ ನಲ್ಲಿರುವ ಹೋಟೆಲ್ ಪ್ರಶಾಂತ್ ಗೆ ತೆರಳಿದ್ದಾರೆ. ಅಲ್ಲಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಅಂತೆಯೇ 150 ರೂ ಕೊಟ್ಟು ಚಿಕನ್ ಬಿರಿಯಾನಿ ಖರೀದಿಸಿ ಮನೆಗೆ ಬಂದಾಗ ಚಿಕನ್ ಬಿರಿಯಾನಿಯಲ್ಲಿ ಚಿಕನ್ ಇರಲಿಲ್ಲ. ಒಂದು ಚೂರು ಕೂಡ ಮಾಂಸ ಇರಲಿಲ್ಲ.
ಇದರಿಂದ ಕೆರಳಿದ ಕೃಷ್ಣಪ್ಪ ಹೋಟೆಲ್ ಗೆ ಕರೆ ಮಾಡಿ ವಿಚಾರ ಹೇಳಿದ್ದಾರೆ. ನಂತರ ಹೋಟೆಲ್ ಮಾಲೀಕರು ಬಿರಿಯಾನಿ ಸಿದ್ದವಿದೆ, ನಿಮ್ಮ ಮನೆಗೆ ತಲುಪಿಸುತ್ತೇವೆ ಎಂದಿದ್ದಾರೆ. ಆದರೆ ಎಷ್ಟೇ ಕಾದರೂ ಬಿರಿಯಾನಿ ಬರಲಿಲ್ಲ. ಇದರಿಂದ ಬೇಸರಗೊಂಡ ದಂಪತಿ ಸಾದಾ ಬಿರಿಯಾನಿ ತಿಂದು ಮಲಗಿದ್ದಾರೆ.
ನಂತರ ದಿನಗಳಲ್ಲಿ ಕೃಷ್ಫಪ್ಪ ಕಾನೂನು ಮೊರೆ ಹೋಗಿದ್ದು, ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಿಸಿ 30 ಸಾವಿರ ರೂ ಪರಿಹಾರ ನೀಡುವಂತೆ ಒತ್ತಾಯಿಸಿದರು. ಆದರೆ ಕೋರ್ಟ್ ಗೆ ಹೋಟೆಲ್ ಮಾಲೀಕರು ಹಾಜರಾಗಲಿಲ್ಲ. ಈ ಪ್ರಕರಣವನ್ನು ಕೃಷ್ಣಪ್ಪ ಅವರೇ ಕೋರ್ಟ್ ನಲ್ಲಿ ವಾದಿಸಿದ್ದು, ಅಕ್ಟೋಬರ್ 5 ರಂದು ಕೋರ್ಟ್ ಹೋಟೆಲ್ ಮಾಲೀಕನಿಗೆ 1 ಸಾವಿರ ದಂಡ ವಿಧಿಸಿ 150 ರೂ ಬಿರಿಯಾನಿ ಹಣ ಕೊಡುವಂತೆ ತೀರ್ಪು ನೀಡಿದೆ.