ದೇಶದ ಸ್ಟಾರ್ಟಪ್ ಹಬ್ ಆಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಹೊಸ ಹೊಸ ಉದ್ಯಮಶೀಲ ಐಡಿಯಾಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇದೀಗ ಬಾಡಿಗೆದಾರ ಹಾಗೂ ಮಾಲೀಕರ ನಡವಿನ ಸಂಬಂಧವೂ ಸ್ಟಾರ್ಟಪ್ ಒಂದರ ಉಗಮಕ್ಕೆ ಕಾರಣವಾದ ವಿನೂತನ ವಿದ್ಯಮಾನ ಐಟಿ ಸಿಟಿಯಲ್ಲಿ ಜರುಗಿದೆ.
ತಾವು ಬಾಡಿಗೆಗೆ ಇರುವ ಮನೆಯ ಮಾಲೀಕ ತಮ್ಮ ಸ್ಟಾರ್ಟಪ್‌ನಲ್ಲಿ $10,000 (ಎಂಟು ಲಕ್ಷ ರೂ) ಹೂಡಿಕೆ ಮಾಡಿರುವ ವಿಚಾರವನ್ನು ಹಂಚಿಕೊಂಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕೃತಕ ಬುದ್ಧಿಮತ್ತೆ ಆಧರಿತ ಮದುವೆ ಅಪ್ಲಿಕೇಶನ್ ’ಬೆಟರ್‌ಹಾಫ್’ನ ಸಹ ಸ್ಥಾಪಕ ಹಾಗೂ ಸಿಇಒ ಪವನ್ ಗುಪ್ತಾ ತಮ್ಮ ಮನೆಯ ಮಾಲೀಕರೊಂದಿಗಿನ ವಾಟ್ಸಾಪ್ ಸಂವಹನದ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಪವನ್‌ರ ಬ್ಯುಸಿನೆಸ್ ಐಡಿಯಾ ಮನೆ ಮಾಲೀಕರಿಗೆ ಭಾರೀ ಇಷ್ಟವಾಗಿದೆ. ’’ನಿಮ್ಮ ಮೇಲೆ ನಾನು ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಿದ್ದೇನೆ,” ಎಂದು ಮಾಲೀಕರು ಹೃದಯಸ್ಪರ್ಶಿ ಸಂದೇಶವೊಂದನ್ನು ಕಳುಹಿಸಿ, ಅವರ ಕೆಲಸದಲ್ಲಿ ಯಶ ಸಿಗಲಿ ಎಂದು ಹಾರೈಸಿದ್ದಾರೆ.
“ಕಠಿಣವಾದ ಉದ್ಯಮವಲಯದಲ್ಲಿ, ನಮ್ಮ ಮನೆ ಮಾಲೀಕರಲ್ಲಿ ಒಬ್ಬ ಅನಿರೀಕ್ಷಿತ ಹೂಡಿಕೆದಾರ ಸಿಕ್ಕಿದ್ದಾರೆ. ಅವರು ನನ್ನ ಸ್ಟಾರ್ಟಪ್ ಬೆಟರ್‌ಹಾಫ್‌ನಲ್ಲಿ $10,000 ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಇರುವ ಉದ್ಯಮಶೀಲ ಉತ್ಸಾಹ ಕಂಡು ನನಗೆ ನಿಜಕ್ಕೂ ಸಂತಸವಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಸುಮ್ಮನೇ ಕರೆಯುವುದಿಲ್ಲ,” ಎಂದು ಈ ಹೊಸ ಅವಕಾಶದಿಂದ ಉತ್ತೇಜಿತರಾದ ಪವನ್ ಟ್ವಿಟರ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.