15 ವರ್ಷದ ಬಾಲಕಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದಿದ್ದ ಬಾಲಕನೊಬ್ಬ ಆಕೆಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಮಾತ್ರವಲ್ಲದೇ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರ ನಿವಾಸಿಯಾದ ಬಾಲಕಿಯು ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಮನೆಯ ಸಮೀಪದಲ್ಲೇ ಇದ್ದ ಬಾಲಕ ಈಕೆಯ ಉತ್ತಮ ಸ್ನೇಹಿತನಾಗಿದ್ದ. ಕಳೆದ ಅನೇಕ ವರ್ಷಗಳಿಂದ ಇಬ್ಬರೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಸೋಮವಾರ ಮಧ್ಯಾಹ್ನ 12:30ರ ಸುಮಾರಿಗೆ ಬಾಲಕ ಬಾಲಕಿಯ ಮನೆಗೆ ಬಂದಿದ್ದನು. ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಆನ್ಲೈನ್ ಕ್ಲಾಸ್ ನೋಡುತ್ತಿದ್ದಳು. ಈ ವೇಳೆ ಬಾಲಕ ನೀನು ನನಗೇಕೆ ಪ್ರಾಮುಖ್ಯತೆ ಕೊಡುತ್ತಿಲ್ಲ ಹಾಗೂ ಬೇರೆ ಹುಡುಗರ ಜೊತೆ ಏಕೆ ಮಾತನಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾನೆ .ಇದಕ್ಕೆ ಪ್ರತಿಯಾಗಿ ಬಾಲಕಿ ಈ ವಿಚಾರದಲ್ಲಿ ಬೇರೆಯವರ ಹೆಸರನ್ನು ತರಬೇಡ ಎಂದು ಹೇಳಿದ್ದಾಳೆ. ನನ್ನ ಮಾತನ್ನು ಕೇಳದೇ ಹೋದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬಾಲಕ, ಬಾಲಕಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಚಾಕುವನ್ನು ಹೊರತೆಗೆದ ಬಾಲಕ, ಬಾಲಕಿಯ ಗಂಟಲಿನ ಬಳಿ ಇರಿದಿದ್ದಾನೆ. ಬಳಿಕ ತಾನು ಟಾಯ್ಲೆಟ್ ಕ್ಲೀನರ್ ಕುಡಿಯಲು ಯತ್ನಿಸಿದ್ದಾನೆ ಮಾತ್ರವಲ್ಲದೇ ಬಾಲಕಿಗೂ ಇದನ್ನು ಕುಡಿಯುವಂತೆ ಒತ್ತಾಯಿಸಿದ್ದ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಬಾಲಕಿಯ ಕುತ್ತಿಗೆಯಿಂದ ರಕ್ತ ಸುರಿಯುತ್ತಿದ್ದಂತೆ ಆತ ಹೆದರಿ ಕೂಡಲೇ ತನ್ನ ಸಂಬಂಧಿಗೆ ಕರೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಲಕನ ಚಿಕ್ಕಪ್ಪ ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಚಿಕ್ಕಪ್ಪ ಘಟನೆಯ ಸಂಪೂರ್ಣ ವಿವರವನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬಾಲಕನ ವಿರುದ್ಧ ಹಲ್ಲೆ, ಕೊಲೆ ಯತ್ನ ಹಾಗೂ ಪೋಸ್ಕೋ ಕಾಯ್ದೆ ಸಂಬಂಧದ ಆರೋಪಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ಬಾಲಕ ಹಾಗೂ ಬಾಲಕಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.