ರಾಜ್ಯ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಹೆಗ್ಗಳಿಕೆಗಳನ್ನು ಪಡೆದಿದ್ದರೂ ಸಹ ಅಲ್ಲಿನ ಮೂಲಭೂತ ವ್ಯವಸ್ಥೆ ಕುರಿತು ಅಸಮಾಧಾನಗಳು ಕೇಳಿ ಬರುತ್ತದೆ. ಅದರಲ್ಲಿ ಪ್ರಮುಖವಾಗಿ ಟ್ರಾಫಿಕ್ ಜೊತೆಗೆ ಹದಗೆಟ್ಟ ರಸ್ತೆ ಕುರಿತು ಜನಸಾಮಾನ್ಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.
ಈ ಕುರಿತಂತೆ ನಾಗರಿಕರು, ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿಯೇ ಕೆಲವೊಂದಷ್ಟು ಮಂದಿ ‘ನೋ ಡೆವಲಪ್ಮೆಂಟ್ ನೋ ಟ್ಯಾಕ್ಸ್’ ಎಂಬ ಆಂದೋಲನವನ್ನು ಹಮ್ಮಿಕೊಂಡಿದ್ದರು. ಜೊತೆಗೆ ತಮ್ಮ ಸ್ವಂತ ಹಣದಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮುಂದಾಗಿದ್ದರು.
ಇದೇ ರೀತಿ ಬೆಂಗಳೂರಿನ ‘ಹೊಸ ರೋಡ್’ ನಿವಾಸಿಗಳು ಆಂದೋಲನ ಹಮ್ಮಿಕೊಂಡಿದ್ದು, ತಮ್ಮ ಕಣ್ಣೆದುರೇ ನಡೆದ ಕೆಲವು ಅಪಘಾತದ ಕುರಿತು ರಸ್ತೆ ದುರವಸ್ತೆಯನ್ನು ಸರಿಪಡಿಸಲು ಮನವಿ ಮಾಡಿದ್ದರು. ಇದರಿಂದ ಯಾವುದೇ ಪ್ರಯೋಜನ ಆಗದ ಕಾರಣ ತಮ್ಮ ಸ್ವಂತ ಹಣದಿಂದ ಈ ಕಾರ್ಯಕ್ಕೆ ಮುಂದಾಗಿದ್ದರು.
ಹೀಗೆ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮುಂದಾಗಿದ್ದ ಇವರುಗಳು ತಮ್ಮ ಕೈಯಿಂದ ಹಣ ಹಾಕಿದ್ದು, ಇದು ಸಾಲದಾದಾಗ ಸಮುದಾಯದ ಮೊರೆ ಹೋಗಿದ್ದರು. ಇದಕ್ಕೆ ಸ್ಪಂದನೆ ಸಿಗದ ವೇಳೆ 32 ವರ್ಷದ ಟೆಕ್ಕಿ ಅರಿಫ್ ಮುದುಗಲ್ ಎಂಬವರು ಇದಕ್ಕಾಗಿ 2.7 ಲಕ್ಷ ರೂಪಾಯಿಗಳನ್ನು ಸಾಲ ಮಾಡಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.