ಬೆಂಗಳೂರು : ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಭಾರತ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ಗಳ ಸಹಯೋಗದಲ್ಲಿ ಆಯೋಜಿಸಿರುವ “ಬೆಂಗಳೂರು ಟೆಕ್ ಶೃಂಗಸಭೆ-2023” ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬೆಂಗಳೂರು ಟೆಕ್ ಶೃಂಗಸಭೆಯನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಸೇರಿದಂತೆ ಹಲವು ಸಚಿವರು, ಅಧಿಕಾರಿಗಳು ಹಾಗೂ ಸಾವಿರಾರು ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.
ಟೆಕ್ ಶೃಂಗಸಭೆಯು ಗಡಿಗಳನ್ನು ಮೀರಿ ಜಾಗತಿಕ ಸಂಪರ್ಕವನ್ನು ಬೆಸೆಯಲಿದ್ದು,’ಬ್ರೇಕಿಂಗ್ ಬೌಂಡರೀಸ್’ ಈ ವರ್ಷದ ಥೀಮ್ ಆಗಿದೆ. ಈ ಸಮ್ಮೇಳನದಲ್ಲಿ ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಲಿದ್ದು, 75ಕ್ಕೂ ಅಧಿಕ ಸೆಷನ್‌ಗಳು, 400ಕ್ಕೂ ಹೆಚ್ಚು ಭಾಷಣಕಾರರು, 350ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು, 600ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 20,000ಕ್ಕಿಂತಲೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ವರ್ಷದ ಬೆಂಗಳೂರು ಟೆಕ್ ಶೃಂಗಸಭೆಯ ಪ್ರಮುಖ ಅಂಶವೆಂದರೆ ಚಂದ್ರಯಾನ-3 ಇಸ್ರೋ-ಇಂಡಸ್ಟ್ರಿ ಪೆವಿಲಿಯನ್, ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಮಹತ್ವದ ಉಪಸ್ಥಿತಿಯನ್ನು ಸಂಕೇತಿಸುತ್ತದೆ ಎಂದರು.
ಬೆಂಗಳೂರು ಟೆಕ್ ಶೃಂಗಸಭೆ-2023ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ : www.bengalurutechsummit.com