
ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು, ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.
ಮಾಗಡಿರಸ್ತೆಯ ಅಗ್ರಹಾರ ನಿವಾಸಿ 21 ವರ್ಷದ ಕೀರ್ತನ್ ಕುಮಾರ್ ಹಲ್ಲೆಗೊಳಗಾದ ಯುವಕ ಎಂದು ಹೇಳಲಾಗಿದೆ. ಆತನ ಮೇಲೆ ಹಲ್ಲೆ ಮಾಡಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿರುವ ಕೀರ್ತನ್ ಕುಮಾರ್ ಬ್ಯಾಡರಹಳ್ಳಿ ಅಂಜನನಗರ ನಿವಾಸಿಯಾಗಿರುವ ಯುವತಿಯನ್ನು ಪ್ರೀತಿಸುತ್ತಿದ್ದು, ಆರೋಪಿ ಯುವಕ ನಿನ್ನೆ ಸಂಜೆ ಕೀರ್ತನ್ ಕುಮಾರ್ ಸಹಚರರೊಂದಿಗೆ ಅಡ್ಡಗಟ್ಟಿ ಆತನೊಂದಿಗೆ ಜಗಳವಾಡಿದ್ದಾನೆ. ಸಹಚರರೊಂದಿಗೆ ಜೊತೆಗೆ ಸೇರಿ ಹಲ್ಲೆ ಮಾಡಿದ್ದಲ್ಲದೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.