ಸಾಮಾಜಿಕ ಜಾಲತಾಣದ ಇಂದಿನ ಕಾಲಮಾನದಲ್ಲಿ ಮೀಮ್/ಟ್ರೋಲ್ ಮಾಡುವ ಮಂದಿಗೆ ಎಲ್ಲಿಲ್ಲದ ಬೇಡಿಕೆ. ಜಾಹೀರಾತುಗಳನ್ನು ಸಹ ಹೆಚ್ಚಿನ ಜನರಿಗೆ ತಲುಪಿಸಲು ಈಗೀಗ ಇದೇ ಟ್ರೆಂಡ್‌ನಲ್ಲಿ ಸೃಷ್ಟಿಸಲಾಗುತ್ತಿದೆ. ಡ್ಯಾನಿಶ್ ಸೇಠ್ ಹಾಗೂ ಅಯ್ಯೋ ಶ್ರದ್ಧಾರ ಕ್ರಿಯಾಶೀಲತೆಯನ್ನು ಬಳಸಿಕೊಂಡು ಹೊಸ ಬಗೆಯ ಜಾಹೀರಾತುಗಳನ್ನು ರಚಿಸಲಾಗುತ್ತಿದೆ.
ಇದೇ ವಿಚಾರವಾಗಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ’ಸ್ಟಾಕ್‌ಗ್ರೋ’ ’ಚೀಫ್ ಮೀಮ್ ಆಫೀಸರ್’ ಎಂಬ ಹುದ್ದೆಯನ್ನೇ ತೆರೆದು, ತಿಂಗಳಿಗೆ ಒಂದು ಲಕ್ಷ ರೂಪಾಯಿ ವೇತನವನ್ನೇ ನಿಗದಿ ಪಡಿಸಿದೆ.
ಕಂಪನಿಯ ಲಿಂಕ್ಡಿನ್ ಪೋಸ್ಟ್ ಪ್ರಕಾರ, ಸೂಕ್ತ ಅಭ್ಯರ್ಥಿಯು ವಿಭಿನ್ನ ಆಯಾಮಗಳಿಂದ ಚಿಂತನೆ ಮಾಡಬಲ್ಲವನಾಗಿದ್ದು, ಕ್ರಿಯಾಶೀಲ, ಪ್ರಯೋಗಶೀಲ, ಹಾಗೂ ಆರ್ಥಿಕ ವಿಚಾರಗಳು ಹಾಗೂ ಮೀಮ್‌ಗಳ ಬಗ್ಗೆ ಅಪಾರ ಆಸಕ್ತಿಯುಳ್ಳವನಾಗಿರಬೇಕು ಎಂದಿದೆ. ಜೊತೆಗೆ ಆ ಅಭ್ಯರ್ಥಿಯಲ್ಲಿ ಒಳ್ಳೆ ಹಾಸ್ಯ ಪ್ರಜ್ಞೆ ಇದ್ದು, ಮಾತಿನ ಮಲ್ಲರಾಗಿಬೇಕು ಮತ್ತು ಬೋರಿಂಗ್ ಅನಿಸಬಲ್ಲಂಥ ವಿಚಾರಗಳನ್ನೂ ಸಹ ಹಾಸ್ಯಮಯವಾಗಿ ಕಟ್ಟಿಕೊಡಬಲ್ಲವರಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಿದೆ ಸ್ಟಾಕ್‌ಗ್ರೋ.
ಇಷ್ಟಲ್ಲದೇ, ಈ ’ಸಿಎಂಓ’ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರಂಗಳ ಕುರಿತು ಅರಿವುಳ್ಳವರಾಗಿದ್ದು, ಹಣಕಾಸು ಹಾಗು ಶೇರು ಮಾರುಕಟ್ಟೆಯ ಮೂಲ ವಿಚಾರಗಳನ್ನು ತಿಳಿದಿರಬೇಕು ಹಾಗೂ ಈ ಕ್ಷೇತ್ರಗಳ ಇತ್ತೀಚಿನ ಟ್ರೆಂಡ್‌ಗಳ ಕುರಿತು ಅಪ್ಡೇಟೆಡ್ ಆಗಿರಬೇಕು ಎಂಬ ಬೇಡಿಕೆಗಳು ಸಹ ಇವೆ. ಅಲ್ಲದೇ ತಮ್ಮದೇ ಐಡಿಯಾಗಳಿಗೆ ಜೀವ ತುಂಬಿ, ಸಕಾರಾತ್ಮಕ ಮನೋಭಾವದೊಂದಿಗೆ ಕೆಲಸ ಮಾಡಲು ಉತ್ಸುಕರಿರಬೇಕು ಎಂದು ಕಂಪನಿ ಹೇಳಿಕೊಂಡಿದೆ.
https://youtu.be/y7fi4CahOIQ