ಬೆಂಗಳೂರು: ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೇ ತಿಳಿಸಿದೆ.
ರಾಯದುರ್ಗ -ತುಮಕೂರು ಹೊಸ ಮಾರ್ಗದ ಭಾಗವಾದ ರಾಯದುರ್ಗ ಯಾರ್ಡ್ ನಲ್ಲಿ ಎರಡನೇ ಹಂತದ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆ ರದ್ದು ಮಾಡಲಾಗಿದೆ. ಇನ್ನು ಕೆಲವು ರೈಲುಗಳು ಬೇರೆ ಮಾರ್ಗದ ಮೂಲಕ ಸಂಚರಿಸುತ್ತವೆ.
ಆಗಸ್ಟ್ 8ರಂದು ಚಿಕ್ಕಜಾಜೂರು -ಗುಂತಕಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ಮತ್ತು ಗುಂತಕಲ್ -ಚಿಕ್ಕಜಾಜೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಆಗಸ್ಟ್ 9ರಂದು ಕೆ.ಎಸ್.ಆರ್. ಬೆಂಗಳೂರು -ಹೊಸಪೇಟೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಚಿಕ್ಕಜಾಜೂರು, ದಾವಣಗೆರೆ, ಅಮರಾವತಿ ಕಾಲೋನಿ, ಹೊಸಪೇಟೆ ಮಾರ್ಗದ ಮೂಲಕ ಸಂಚರಿಸಲಿದೆ, ಈ ರೈಲು ಚಿತ್ರದುರ್ಗದಿಂದ ತೋರಣಗಲ್ಲು ನಿಲ್ದಾಣಗಳವರೆಗೆ ನಿಲುಗಡೆ ಇರುವುದಿಲ್ಲ.
ಹೊಸಪೇಟೆ -ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ, ಚಿಕ್ಕಜಾಜೂರು ಮಾರ್ಗವಾಗಿ ಸಂಚರಿಸುತ್ತದೆ. ಈ ರೈಲು ಕೂಡ ತೋರಣಗಲ್ಲಿನಿಂದ ಚಿತ್ರದುರ್ಗದವರೆಗೆ ನಿಲುಗಡೆ ಆಗುವುದಿಲ್ಲ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.