
ಸಾಮಾನ್ಯವಾಗಿ ಮನೆಗೆಲಸದ ಮಂದಿಯನ್ನು ಸಮಾಜದಲ್ಲಿ ಎಷ್ಟರ ಮಟ್ಟಿಗೆ ತಾತ್ಸಾರದ ಧೋರಣೆಯಲ್ಲಿ ನೋಡಲಾಗುತ್ತದೆ ಎಂದು ನಾವೆಲ್ಲಾ ತಿಳಿದಿದ್ದೇವೆ.
ಈ ವಾಸ್ತವದ ಅತಿರೇಕವೊಂದು ಬೆಂಗಳೂರಿನ ವಸತಿ ಸಮುಚ್ಚಯವೊಂದರಲ್ಲಿ ಜರುಗಿದೆ. ಈ ಸಮುಚ್ಚಯದ ನಿವಾಸಿಗಳ ಕಲ್ಯಾಣ ಸಂಘವು ಮನೆಗೆಲಸದ ಮಂದಿಗೆ ತಂತಮ್ಮ ಕೆಲಸಗಳ ಶಿಫ್ಟ್‌ಗಳ ನಡುವೆ ಕಾಯಲೆಂದು ಪ್ರತ್ಯೇಕ ’ವೇಟಿಂಗ್ ಏರಿಯಾ’ಗಳ ಸ್ಥಾಪನೆಗೆ ಆಗ್ರಹಿಸಿದ್ದು ಭಾರೀ ಸುದ್ದಿಯಾಗಿದೆ.
ಈ ಸಂಬಂಧ ಹೊರಡಿಸಿದ ಸುತ್ತೋಲೆಯಲ್ಲಿ, “ಹೋದ ಬಂದ ಕಡೆಯೆಲ್ಲಾ ಮನೆಗೆಲಸದವರನ್ನು ನೋಡುವುದು ಒಂದು ರೀತಿ ಮುಜುಗರ ಎನಿಸುತ್ತದೆ,” ” ಇವರು ಪಾರ್ಕ್, ಆಂಫಿಥಿಯೇಟರ್, ಗಜ಼ೆಬೋಗಳಂಥ ಸಾಮಾನ್ಯವಾದ ಜಾಗಗಳಲ್ಲಿ ಓಡಾಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗೆ ನಿಗಾ ಇಡಲು ಅಡಚಣೆಯಾಗುತ್ತದೆ,” “ಅಡುಗೆ ಮಾಡುವವರು, ಕಾರ್ಪೆಂಟರ್‌ಗಳು, ಪ್ಲಂಬರ್‌ಗಳು ಕಟ್ಟಡದ ರಿಸೆಪ್ಷನ್‌ನ ಸೋಫಾದಲ್ಲಿ ಕುಳಿತುಕೊಳ್ಳುವ ಕಾರಣ ನಮ್ಮಲ್ಲಿ ಅನೇಕರಿಗೆ ಆ ಸೋಫಾಗಳ ಮೇಲೆ ಕೂರುವುದು ಇಷ್ಟವಾಗುತ್ತಿಲ್ಲ,” ಎಂದೆಲ್ಲಾ ಈ ಸುತ್ತೋಲೆಯಲ್ಲಿ ಬರೆಯಲಾಗಿದೆ.
ಸಮಾಜದಲ್ಲಿ ಉಳ್ಳವರು ಹಾಗೂ ಉಳ್ಳದವರ ನಡುವಿನ ವರ್ಗೀಕರಣ ಹೇಗೆಲ್ಲಾ ನಡೆಯುತ್ತದೆ ಎಂದು ಸಾರಿ ಹೇಳುವ ಅನೇಕ ನಿದರ್ಶನಗಳಲ್ಲಿ ಇದೂ ಒಂದಾಗಿದ್ದು, ನೆಟ್ಟಿಗರಿಂದ ಭಾರೀ ಟೀಕೆಗೆ ಗ್ರಾಸವಾಗಿದೆ.
“ಮನೆಗೆಲಸದವರು ಸುತ್ತಲೂ ಇದ್ದಾಗ ನಿವಾಸಿಗಳಿಗೆ ಕಿರಿ ಕಿರಿ ಎನಿಸಬಹುದು. ಪ್ರಿಯ ನಿವಾಸಿಗಳೇ ಈ ಕ್ಷೇತ್ರಗಳೆಲ್ಲಾ ಕಾರ್ಪೊರೇಟ್ ಆಗಿ ಮಾರ್ಪಟ್ಟರೆ ನಿಮಗೂ ಸಹ ಮನೆಗೆಲಸದವರ ಸೇವೆಗಳನ್ನು ಪಡೆಯುವುದು ಅಸಾಧ್ಯವಾಗುತ್ತದೆ. ನಾವು ಅಭಿವೃದ್ಧಿ ಹೊಂದಿದ ದೇಶವಾಗುವವರೆಗೂ ಈ ಪ್ರಯೋಜನಗಳನ್ನು ಎಂಜಾಯ್ ಮಾಡಿ,” ಎಂದು ನೆಟ್ಟಿಗರೊಬ್ಬರು ಮಾರ್ಮಿಕವಾಗಿ ಕಾಮೆಂಟ್ ಹಾಕಿದ್ದಾರೆ.
“ಇದೇ ಮನೆಗೆಲಸದವರು ನಿಮ್ಮ ಮನೆಯಲ್ಲೆಲ್ಲಾ ಓಡಾಡಿಕೊಂಡು ನಿಮಗಾಗಿ ಅಡುಗೆ ಮಾಡುವುದು, ಕ್ಲೀನಿಂಗ್ ಮಾಡುವುದು ಓಕೆ. ಆದರೆ ಅವರನ್ನು ಪಾರ್ಕ್‌ನಲ್ಲಿ ನೋಡುವುದು ನಿಮಗೆ ತೊಂದರೆ ಅನಿಸುತ್ತದೆಯೇ?” ಎಂದು ಕೇಳಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.