15 ವರ್ಷಗಳ ಹಿಂದೆ 14 ವರ್ಷ ಪ್ರಾಯದ ವಿದ್ಯಾರ್ಥಿನಿಯಾಗಿದ್ದ ಮಹಿಳೆಯೊಬ್ಬರು ದೆಹಲಿಗೆ ಶಾಲಾ ಪ್ರವಾಸಕ್ಕೆ ತೆರಳಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದಳು. ಶಾಲಾ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 9ನೇ ತರಗತಿಯಿಂದಲೇ ಅನಾರೋಗ್ಯಕ್ಕೀಡಾದ ಪುತ್ರಿಯ ಪರ ಕಾನೂನು ಹೋರಾಟ ನಡೆಸಿದ್ದ ಬೆಂಗಳೂರಿನ ಬನಶಂಕರಿಯ 62 ವರ್ಷದ ನಿವಾಸಿ ಕೊನೆಗೂ ನ್ಯಾಯ ಪಡೆದಿದ್ದಾರೆ.
9ನೇ ತರಗತಿಯಲ್ಲಿದ್ದ ವೇಳೆ ಪ್ರವಾಸದ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿದ್ದ ಪುತ್ರಿಗೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇತ್ತು. ಆದರೆ ಆ ಸಮಯದಲ್ಲಿ ಶಾಲಾ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದಾಗಿ ಆಕೆ ಜೀವಮಾನ ಪೂರ್ತಿ ಹಾಸಿಗೆಯಲ್ಲಿಯೇ ಕಾಲ ಕಳೆಯುವಂತಾಯ್ತು.
ಶಾಲಾ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ 62 ವರ್ಷದ ತಂದೆಗೆ ಜಯ ಸಿಕ್ಕಿದೆ. ನಿರ್ಲಕ್ಷ್ಯ ತೋರಿದ ಶಾಲೆಯು ಪರಿಹಾರದ ರೂಪವಾಗಿ 88 ಲಕ್ಷ ರೂಪಾಯಿಯನ್ನ ನೀಡಬೇಕು ಎಂದು ಹೇಳಿದೆ.
ವಾಟರ್ ಪ್ಲಾಂಟ್ ಉದ್ಯಮವನ್ನ ನಡೆಸುತ್ತಿದ್ದ ತಂದೆ ಪುತ್ರಿಗಾಗಿ ಕೆಲಸ ಬಿಡುವಂತಾಯ್ತು. ಪುತ್ರಿ ತನ್ನ ಶಕ್ತಿಯನ್ನು ಕಳೆದುಕೊಂಡಳು ಹಾಗೂ ನಾವು ನಮ್ಮ ಜೀವವನ್ನೇ ಕಳೆದುಕೊಂಡಂತಾಗಿದೆ. ಈ 15 ವರ್ಷಗಳಲ್ಲಿ ನಾವು ಸಾಕಷ್ಟು ಆಸ್ಪತ್ರೆಗಳಿಗೆ ಸುತ್ತಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಸಂತ್ರಸ್ತ ಯುವತಿ ವಿಶೇಷ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದ್ದಾಳೆ. ಆದರೆ ಈಗ ಕೊರೊನಾದಿಂದಾಗಿ ಮನೆಯಲ್ಲೇ ಇರುವ ಈಕೆ ಎಲ್ಲಾ ಕೆಲಸಗಳಿಗೂ ಪೋಷಕರನ್ನೇ ಅವಲಂಭಿಸಬೇಕಿದೆ. ಡಿಸೆಂಬರ್ 2006ರಲ್ಲಿ ಶಿಕ್ಷಕರು ಹಾಗೂ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಅಕ್ಷತಾ ಡಿಸೆಂಬರ್ 24ರಂದು ಜ್ವರದಿಂದ ಬಳಲಿದ್ದಳು. ಈ ಬಗ್ಗೆ ತನ್ನ ಸಹಪಾಠಿ ಹಾಗೂ ಶಿಕ್ಷಕರಿಗೆ ಮಾಹಿತಿಯನ್ನೂ ನೀಡಿದ್ದಳು.
ಆದರೆ ಆಕೆಗೆ ಯಾರು ಕೂಡ ಪ್ರಥಮ ಚಿಕಿತ್ಸೆ ನೀಡಿರಲಿಲ್ಲ. ಇದಾದ ಬಳಿಕ ಆಕೆಯ ಆರೋಗ್ಯ ಹದಗೆಡುತ್ತಲೇ ಹೋಯ್ತು. ಡಿಸೆಂಬರ್ 31ರಂದು ಅಕ್ಷತಾ ಸ್ನಾನಗೃಹದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅಕ್ಷತಾ ಹರ್ಪಿಸ್ ಸಿಂಪ್ಲೆಕ್ಸ್ ಎನ್ಸೆಫಾಲಿಟಿಸ್ ಎಂಬ ಜ್ವರದಿಂದ ಬಳಲಿದ್ದು ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ಆರೋಗ್ಯ ಸುಧಾರಿಸುತ್ತಿತ್ತು ಎಂದು ಹೇಳಿದ್ದರು.