ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೌಡಿಗಳ ಗುಂಪೇ ಮತ್ತೊಂದು ರೌಡಿಯನ್ನು ಹತ್ಯೆ ಮಾಡಿರುವ ಘಟನೆ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
8 ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ರೌಡಿ ನಾಗ ಎಂಬಾತ ರೌಡಿ ವೆಂಕಟೇಶ್ ಎಂಬಾತನಿಗೆ ಕೊಲೆ ಬೆದರಿಕೆ ಹಾಕಿದ್ದ. ’ನಿನ್ನ ಕೊಲೆ ಮಾಡುವೆ ಇದನ್ನು ಸೇವ್ ಮಾಡಿಟ್ಟುಕೋ ಶಿಷ್ಯ. ಬದುಕಬೇಕು ಎಂದ್ರೆ ಕ್ಷಮೆ ಕೇಳು. ಇಲ್ಲ ಕೊಲೆ ಮಾಡುವೆ’ ಎಂದು ಬೆದರಿಕೆಯೊಡ್ಡಿದ್ದ. ಇದಾದ ಬಳಿಕ ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಸಂಧಾನ ಕೂಡ ನಡೆದಿತ್ತು ಎನ್ನಲಾಗಿದೆ. ಇಷ್ಟೆಲ್ಲ ಆದರೂ ಪೊಲೀಸರು ಮಾತ್ರ ಏನೂ ಗೊತ್ತಿಲ್ಲದವರಂತೆ ಕೈಕಟ್ಟಿ ಕುಳಿತಿದ್ದಾರಾ? ಎಂಬ ಅನುಮಾನವ್ಯಕ್ತವಾಗಿದೆ.
ಅಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ರೌಡಿ ನಾಗ ಹಾಗೂ ಗ್ಯಾಂಗ್ ಈಗ ರೌಡಿ ವೆಂಕಟೇಶ್ ನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಹಳೇ ದ್ವೇಷವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ರೌಡಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಬೆದರಿಕೆ ಹಾಕಿದ್ದರೂ ಪೊಲೀಸರು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾಕಷ್ಟು ಅನುಮಾನ ಹುಟ್ಟಿಸುತ್ತಿದೆ. ಜನರು ಆತಂಕದಲ್ಲಿ ಬದುಕುವ ಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.