ಬೆಂಗಳೂರಿನಲ್ಲಿ ಸ್ಕೂಟರ್ ಚಾಲಕನೊಬ್ಬ ಕಾರ್ ಓವರ್‌ಟೇಕ್ ಮಾಡಲು ವಿಫಲವಾದ ಕಾರಣ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಈ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಾಳಿಯಿಂದ ಕಾರಿನ ORVM ಮತ್ತು ಕಾರ್ ಕಿಟಕಿಯ ಗಾಜು ಹಾನಿಗೊಂಡಿವೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಕಾರ್ ಮಾಲೀಕ ದೀಪಕ್ ಜೈನ್ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಸ್ಕೂಟರ್ ಸವಾರ ಕಾರನ್ನು ಹಿಂದಿಕ್ಕಲು ವಿಫಲವಾದ ನಂತರ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಐಟಿ ವೃತ್ತಿಪರರಾದ ದೀಪಕ್ ಜೈನ್ ಜೂನ್ 2 ರ ಬೆಳಿಗ್ಗೆ 11:39 ರ ಸುಮಾರಿಗೆ VIBGYOR ಹೈಸ್ಕೂಲ್ ರಸ್ತೆಯಲ್ಲಿ ದಾಳಿ ನಡೆದಿದೆ ಎಂದಿದ್ದಾರೆ. KA 03 KU 6880 ನೋಂದಣಿ ಸಂಖ್ಯೆಯ ಬೂದು ಬಣ್ಣದ ಓಲಾ ಸ್ಕೂಟರ್ ಸವಾರ ಆರಂಭದಲ್ಲಿ ದೀಪಕ್ ಜೈನ್ ಅವರ ಕಾರನ್ನು ಎಡಭಾಗದಿಂದ ಹಿಂದಿಕ್ಕಿದ್ದಾನೆ.
ಇದು ತಕ್ಷಣವೇ ಯಾವುದೇ ಪ್ರಯೋಜನಕ್ಕೆ ಕಾರಣವಾಗಲಿಲ್ಲ. ಆದಾಗ್ಯೂ ಸ್ವಲ್ಪ ದೂರ ಕ್ರಮಿಸಿದ ನಂತರ ಸ್ಕೂಟರ್ ಚಾಲಕನ ನಡವಳಿಕೆ, ಬೆದರಿಕೆಗೆ ತಿರುಗಿತು. ಆತ ದೀಪಕ್ ಜೈನ್ ಅವರ ಕಾರನ್ನು ಹಿಂಬಾಲಿಸಲು ಪ್ರಾರಂಭಿಸಿ ಕೂಗುತ್ತಾ, ಹಾರ್ನ್ ಮಾಡುತ್ತಾ ಕಾರ್ ನಿಲ್ಲಿಸುವಂತೆ ಒತ್ತಾಯಿಸಿದ್ದಾನೆ.
ಸ್ಕೂಟರ್ ಚಾಲಕ ಕಾರ್ ಗೆ ಅಡ್ಡಿಪಡಿಸಿ ಕಾರಿನ ಮುಂದೆ ಬಂದು ತನ್ನ ಸ್ಕೂಟರ್ ನಿಲ್ಲಿಸಿದ. ತಕ್ಷಣ ಕೋಪದ ಭರದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ತೆಂಗಿನಕಾಯಿ ಚಿಪ್ಪನ್ನು ಎತ್ತಿಕೊಂಡು ಕಾರ್ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದ. ಬಳಿಕ ಆತ ಕಾರಿನ ಬಲಭಾಗದ ಕಿಟಕಿಯನ್ನು ತೆಂಗಿನ ಚಿಪ್ಪಿನಿಂದ ಒಡೆದು ಕಿಟಕಿ ತೆರೆಯುವಂತೆ ದೀಪಕ್ ಜೈನ್ ರನ್ನ ಒತ್ತಾಯಿಸಿದ್ದಾನೆ. ನಂತರ ಕಾರಿನ ORVM ಒಡೆದು ತಮ್ಮ ಆಕ್ರಮಣಕಾರಿ ವರ್ತನೆಯನ್ನು ಮುಂದುವರೆಸಿದ. ಪದೇ ಪದೇ ಕಿಟಕಿಗೆ ಹೊಡೆದು ತೆಂಗಿನ ಚಿಪ್ಪನ್ನು ಹಿಂದಿನ ಗಾಜಿನ ಮೇಲೆ ಎಸೆದ. ತಕ್ಷಣ ದೀಪಕ್ ಜೈನ್ ಸ್ಥಳದಿಂದ ಕಾರ್ ಚಲಾಯಿಸಿ ಮುಂದೆ ಸಾಗಿದರು.
ನಂತರ KA 04 MW 2000 ನೋಂದಣಿ ಸಂಖ್ಯೆಯ ಬೂದು ಬಣ್ಣದ ರೆನಾಲ್ಟ್ ಕಾರ್ ಸುಮಾರು 300 ಮೀಟರ್ ಮುಂದೆ ದೀಪಕ್ ಜೈನ್ ಅವರ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತು. ಈ ಅನುಮಾನಾಸ್ಪದ ನಡೆಯನ್ನು ಗಮನಿಸಿದರೆ, ರೆನಾಲ್ಟ್ ಚಾಲಕ ಮತ್ತು ಬೈಕ್ ಸವಾರ ಇಬ್ಬರೂ ಪರಿಚಿತರಿದ್ದು ಇಂತಹ ಕೃತ್ಯಗಳಲ್ಲಿ ಭಾಗಿದಾರರೆಂದು ಊಹಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಇತರರಿಂದ ಕನಿಷ್ಠ ಐದರಿಂದ ಏಳು ರೀತಿಯ ಇಂತಹ ಪ್ರಕರಣಗಳು ವರದಿಯಾಗಿವೆ ಎಂದು ಅವರು ಉಲ್ಲೇಖಿಸಿದ್ದಾರೆ. ದಾಳಿಯ ನಂತರ ದೀಪಕ್ ಜೈನ್‌ಗೆ ವರ್ತೂರು ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು, ತನಿಖೆಯಲ್ಲಿ ಸ್ವಲ್ಪ ಪ್ರಗತಿಯಾಗಿದ್ದು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದ್ದಾರೆ. ಭದ್ರತೆ ಮತ್ತು ಗೌಪ್ಯತೆಯ ಕಾರಣಗಳಿಗಾಗಿ ಅವರು ಔಪಚಾರಿಕ ದೂರನ್ನು ಸಲ್ಲಿಸಲು ಖುದ್ದು ಠಾಣೆಗೆ ಭೇಟಿ ನೀಡುವುದಾಗಿ ದೃಢಪಡಿಸಿದ್ದಾರೆ.