ಬೆಂಗಳೂರು: ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಠಿಸಿದೆ. ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದು, ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. 25 ಬೈಕ್ ಗಳು ಜಖಂಗೊಂಡಿವೆ.
ಬೆಂಗಳೂರಿನಲ್ಲಿ ಮಳೆಯಿಂದ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಕಾವೇರಿ ನಗರದಲ್ಲಿ 55 ವರ್ಷದ ಮುನಿಯಮ್ಮ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿ ವೆಂಕಟಾಚಲಪತಿ ಭೇಟಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ನೀರಿನಲ್ಲಿ ಯುವಕ ಕೊಚ್ಚಿಹೋದ ಘಟನೆ ನಡೆದಿದೆ. ಕೆಆರ್ ಪುರಂ ನ ಗಾಯತ್ರಿ ಬಡಾವಣೆಯಲ್ಲಿ ರಾಜಕಾಲುವೆಯ ನೀರಿನಲ್ಲಿ ಯುವಕ ಮಿಥುನ್ ಕೊಚ್ಚಿಹೋಗಿದ್ದಾರೆ. ಶಿವಮೊಗ್ಗ ಮೂಲದ ಮಿಥುನ್ ಸಾಗರ್ ನೀರುಪಾಲಾದವರು ಎಂದು ಹೇಳಲಾಗಿದೆ. ರಾಜಕಾಲುವೆ ಪಕ್ಕದ ಗೋಡೆ ಬಿದ್ದ ಶಬ್ದ ಕೇಳಿ ಹೊರಗೆ ಬಂದಿದ್ದ ವೇಳೆಯಲ್ಲಿ ನೀರಿನ ಹರಿವು ಹೆಚ್ಚಾಗಿ ದುರಂತ ಸಂಭವಿಸಿದೆ. ಅಗ್ನಿಶಾಮಕದಳ ಮತ್ತು SDRF ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಕೆಆರ್ ಪುರಂ ಕೃಷ್ಣ ಥಿಯೇಟರ್ ಬಳಿ ಕಾಂಪೌಂಡ್ ಕುಸಿದು ಪಾರ್ಕಿಂಗ್ ಮಾಡಲಾಗಿದ್ದ 25 ಬೈಕ್ ಗಳು ಜಖಂಗೊಂಡಿವೆ. ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಆರ್ ಪುರಂ ಕ್ಷೇತ್ರದಲ್ಲಿ ಮಳೆಯಿಂದಾಗಿ ಭಾರಿ ಅನಾಹುತ ಉಂಟಾಗಿದ್ದು, ಸಚಿವ ಬೈರತಿ ಬಸವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಳೆಯಾಗಿರುವುದರಿಂದ ಅವಾಂತರವಾಗಿದ್ದು, ಮಳೆಯಿಂದ ಹಾನಿಯಾದ ಮನೆಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.