ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರ ಹಾಕುವಲ್ಲಿ ಜನ ಹೈರಾಣಾಗಿದ್ದಾರೆ.
ಮಲ್ಲೇಶ್ವರದ ಶ್ರೀರಾಮಮಂದಿರ ಮೈದಾನದ ಪಟಾಕಿ ಮಳಿಗೆಗಳಿಗೆ ನೀರು ನುಗ್ಗಿದ್ದು, ಪಟಾಕಿಗಳು ಹಾಳಾಗಿವೆ. ಇದರಿಂದ ವ್ಯಾಪಾರಸ್ಥರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗುರುವಾರ ಹಬ್ಬದ ಸಡಗರದಲ್ಲಿದ್ದ ಜನ ಏಕಾಏಕಿ ಸುರಿದ ಭಾರಿ ಮಳೆಯಿಂದ ತತ್ತರಿಸುವಂತಾಗಿದೆ.
ಹಬ್ಬದ ಖರೀದಿಗೆ ಹೋದವರು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು ಮಳೆಯಿಂದಾಗಿ ಮನೆಗೆ ತೆರಳಲು ಪರದಾಡುವಂತಾಗಿದೆ. ರಸ್ತೆಗಳಲ್ಲಿ ಎರಡು ಮೂರು ಅಡಿಗಳಷ್ಟು ನೀರು ಹರಿದಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಸಿಟಿ ಕ್ವಾಟ್ರಸ್ ಸಮೀಪ ಮನೆಗಳಿಗೆ ನೀರು ನುಗ್ಗಿದೆ.
ಮನೆಮಂದಿಯೆಲ್ಲ ಸೇರಿ ಹಬ್ಬದೂಟ ಮಾಡಿ ಪಟಾಕಿ ಸಿಡಿಸಿ ಸಂಭ್ರಮದಿಂದ ಹಬ್ಬ ಆಚರಿಸಲು ಮುಂದಾಗಿದ್ದ ವೇಳೆಯಲ್ಲೇ ಭಾರಿ ಮಳೆಯಿಂದ ನಿರಾಸೆಯಾಗಿದೆ. ವಿವಿ ಪುರ, ಹಂಪಿನಗರ, ಆಂಜನೇಯ ಟೆಂಪಲ್ ವಾರ್ಡ್, ವಿದ್ಯಾಪೀಠ, ನಾಗರಬಾವಿ, ನಾಯಂಡಹಳ್ಳಿ, ಸಂಪಂಗಿರಾಮನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.