ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ಒಂದು ಗಂಟೆ ಅವಧಿಯಲ್ಲಿ ಹಲವೆಡೆ 10 ಸೆಂಟಿಮೀಟರ್ ಗಿಂತಲೂ ಅಧಿಕ ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರು, ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ.
ಹಲವೆಡೆ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡಿ ಮನೆಯಲ್ಲಿರುವ ನೀರು ಹಾಕುವಲ್ಲಿ ಜನ ಹೈರಣಾಗಿದ್ದಾರೆ. ರಾತ್ರಿಯಿಡಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.
ನಗರದ ಹಲವು ರಸ್ತೆಗಳು ಕೆರೆಯಂತಾಗಿವೆ. ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಗುಡುಗು ಸಹಿತ ಧಾರಾಕಾರ ಮಳೆಯಾಗಿ ಶಿವಾಜಿನಗರದಲ್ಲಿ 20 ಅಡಿ ಎತ್ತರದ ಗೋಡೆ ಕುಸಿದಿದೆ. ಶ್ರೀರಾಂಪುರ ಮೆಟ್ರೋ ಸ್ಟೇಷನ್ ಗೆ ನೀರು ನುಗ್ಗಿದೆ.