ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಒಂದೆಡೆ ಮಳೆ ಅವಾಂತರದಿಂದ ಜನರು ಕಂಗೆಟ್ಟಿದ್ದರೆ ಮತ್ತೊಂದೆಡೆ ರಾಜಕೀಯ ನಾಯಕರ ಬೇಜವಾಬ್ದಾರಿ ಹೆಳಿಕೆಗಳು ಜನರನ್ನು ಇನ್ನಷ್ಟು ರೊಚ್ಚಿಗೇಳಿಸುವಂತೆ ಮಾಡಿದೆ. ಮಳೆ ನೀರನ್ನು ವಾಪಾಸ್ ಆಕಾಶಕ್ಕೆ ಕಳುಹಿಸಲು ಆಗುತ್ತಾ? ಎಂಬ ಗೃಹ ಸಚಿವ ಡಾ. ಪರಮೇಶ್ವರ್ ಅವರ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬೇಜವಾಬ್ದಾರಿ ಹೇಳಿಕೆಗಳು ಕನಿಷ್ಠ ಪಕ್ಷ ಅವರ ಇಲಾಖೆಗೆ ಮಾತ್ರ ಸೀಮಿತವಾಗಿದ್ದಾರೆ ಚೆನ್ನಾಗಿತ್ತು.ಸತತ ಮಳೆಯಿಂದಾಗಿ ಬೆಂಗಳೂರಿನ ಜನತೆ ಹೈರಾಣಾಗಿದ್ದಾರೆ. ಮೂಲಸೌಕರ್ಯದಲ್ಲಿರುವ ನ್ಯೂನ್ಯತೆಗಳು ನಗರದ ಘನತೆಗೆ ಕುತ್ತು ತರುತ್ತಿವೆ. ಇಂತಹ ಸಂದರ್ಭದಲ್ಲಿ ಇಂತಹ ಸಂವೇದನಾ ರಹಿತ ಹೇಳಿಕೆಗಳನ್ನ ನೀಡುವುದು ಡಾ.ಪರಮೇಶ್ವರ್ ಅವರಂತಹ ಹಿರಿಯ ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಮಳೆಯ ನೀರನ್ನ ಆಕಾಶಕ್ಕೆ ವಾಪಸ್ಸು ಕಳುಹಿಸುವುದಕ್ಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ಗೃಹ ಸಚಿವರ ಆಕಸ್ಮಿಕ ನುಡಿಮುತ್ತುಗಳಿಗೆ ಕಡಿವಾಣ ಹಾಕದಿದ್ದರೆ, ಜನ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮನೆಗೆ ಕಳುಹಿಸುವುದಂತೂ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.