
ಬೆಂಗಳೂರು: ವರುಣಾರ್ಭಟಕ್ಕೆ ರಾಜ್ಯ ರಾಜಧಾನಿ ಬೆಂಗಳೂನ ಜನರು ತತ್ತರಿಸಿ ಹೋಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಈ ನಡುವೆ ಹವಾಮಾನ ಇಲಾಖೆ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ. ಪ್ರಕೃತಿ ವಿಕೋಪಕ್ಕೆ ಜನರು ನಲುಗುತ್ತಿದ್ದರೆ ವಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರು ಪರಸ್ಪರ ಆರೊಪ-ಪ್ರತ್ಯಾರೋಪಗಳ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಭಾರಿ ಮಳೆಗೆ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಅವಾಂತರ, ಜನರ ಪರಿಪಾಟಲು ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್ ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ ಎಂದು ಕಿಡಿಕಾರಿದ್ದಾರೆ.
ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿದೆ. ಹೂಡಿಕೆದಾರರ ಸ್ವರ್ಗವಾಗಿದ್ದ ಬೆಂಗಳೂರು, ಜಾಗತಿಕ ಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.