ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಮತ್ತೆ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಬಡಾವಣೆಗಳು ಕೆರೆಯಂತಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜನರು ಸಮಸ್ಯೆಗೆ ಸಿಲುಕಿದ್ದರೂ ಈ ಸರ್ಕಾರಕ್ಕೆ ಚಿಂತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಲವು ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಗುಂಡಿ ಮುಚ್ಚಲು ಅದೇನೋ ಗಡುವು ಕೊಟ್ಟಿದ್ದರಲ್ಲ ಅದೇನಾಯ್ತು? ಹಾರೆ ಹಿಡಿದು ಸ್ವತಃ ಡಿಸಿಎಂ ಅವರೇ ಹೋಗಿದ್ದರಲ್ಲ? ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ ಮತ್ತೆ ನೀರು ನಿಂತಿವೆ ಎಂದು ಕಿಡಿಕಾರಿದ್ದಾರೆ.
ಜನರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಚಿಂತೆ ಇಲ್ಲ, ಅಭಿವೃದ್ಧಿ ಕೆಲಸವಂತೂ ದೇವರೇ ಕಾಪಾಡಬೇಕು. ಅಧಿಕಾರವಿದ್ದರೂ ಇಂತಹ ಆಡಳಿತ ಕೊಡುತ್ತಿದ್ದೀರಲ್ಲ ಜನರೇ ತೀರ್ಮಾನ ಮಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.