ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಮಳೆಯೂರಾಗಿ ಮಾರ್ಪಟ್ಟಿದೆ. ತಡರಾತ್ರಿಯಿಂದ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ಬೆಂಗಳೂರಿಗರು ವರುಣಾಘಾತಕ್ಕೆ ತತ್ತರಿಸಿ ಹೋಗಿದ್ದಾರೆ.
ಮಳೆಯಿಂದಾಗಿ ಬೆಂಗಳೂರಿನ ಬಹುತೇಕ ಕಡೆ ಅವಾಂತರಗಳು ಸೃಷ್ಟಿಯಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು, ಜನರು ಬೆಳಿಗ್ಗೆವರೆಗೂ ಜಾಗರಣೆ ಮಾಡಿದ್ದಾರೆ. ಇನ್ನು ಮನೆಯಿಂದ ಹೊರಬರಲಾಗದ ಸ್ಥಿತಿ. ಪ್ರಮುಖ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯುತ್ತಿದೆ. ಇನ್ನು ಹಲವೆಡೆ ರಸ್ತೆಗಳ ಮೇಲೆ ರಾಜಕಾಲುವೆ ನೀರು, ಚರಂಡಿ ನೀರು ನಿಂತಿವೆ.
ಮಳೆ ಅಬ್ಬರದ ಜೊತೆಗೆ ರಾಜಧಾನಿಯ ವಿವಿಧೆಡೆ ವಿದ್ಯುತ್ ಸ್ಥಗಿತಗೊಂಡಿದೆ. ಇನ್ನು ಕೆಲವೆಡೆ ಕರೆಂಟ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಇಂಟರ್ ನೆಟ್ ಸೇವೆ ಕಡಿತಗೊಂಡಿದ್ದು, ಜನರು ತೊಂದರೆ ಮೇಲೆ ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಇನ್ನೂ ಎರಡು ದಿನಗಳ ಕಾಲ ವರುಣಾರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಡರಾತ್ರಿ ಅಬ್ಬರಿಸಿದ ಮಳೆ ಬೆಳಗಿನವರೆಗೂ ನಿಂತಿಲ್ಲ. ಅರ್ಧಗಂಟೆ ಬಿಡುವು ಪಡೆದ ಮಳೆರಾಯ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಬೆಂಗಳೂರಿಗರ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಜನರು ಮನೆಯಲ್ಲಿಯೇ ಬಂಧಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ. ರಾಜಧನಿ ಜನರು ನರಕಾಅತನೆ ಅನುಭವಿಸುವಂತಾಗಿದೆ.