ಬೆಂಗಳೂರು: ಮಳೆ ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳ ತಂಡ ಕಳೆದ 48 ಗಂಟೆಗಳಿಂದ ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗ ಪರಿಹಾರ ಕಾರ್ಯ ನಡೆಯುವುದು ಮುಖ್ಯವೇ ಹೊರತು, ನಾನು ಸ್ಥಳಕ್ಕೆ ಭೇಟಿ ನೀಡುವುದಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ನಾನು ಭೇಟಿ ನೀಡುವುದಷ್ಟೇ ಮುಖ್ಯವಲ್ಲ. ಕೆಲಸಗಳು ಆಗಬೇಕು. ನಾನು ಭೇಟಿ ಮಾಡಿದರೆ ಪ್ರಚಾರ ಸಿಗುತ್ತದೆ. ನಮಗೆ ಪ್ರಚಾರ ಮುಖ್ಯವಲ್ಲ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ನೀಡಲು ನಾವು ಸಮಿತಿ ರಚಿಸಿದ್ದೇವೆ ಎಂದರು.
ನಾನು ಕೂಡ ಸೋಮವಾರ ಸಂಜೆ ಮಳೆಯಲ್ಲಿ ಸಿಲುಕಿದ್ದೆ. ಚಳ್ಳಕೆರೆಯಿಂದ ಬರುವಾಗ ನೆಲಮಂಗಲದ ಬಳಿ ಸೇತುವೆ ಮೇಲೆ 2 ಅಡಿ ನೀರಿತ್ತು. ನಮ್ಮ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದ್ದು, ಕಳೆದ 48 ಗಂಟೆಗಳಿಂದ ಅವರು ಮಳೆ ಪೀಡಿತ ಪ್ರದೇಶಗಳಲ್ಲಿ ಇದ್ದಾರೆ. ಈ ಸಮಯದಲ್ಲಿ ಅವರನ್ನು ಮುಜುಗರಕ್ಕೀಡು ಮಾಡಲು ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.
ಚೌಡೇಶ್ವರಿ ನಗರದಲ್ಲಿ 150 ಎಂಎಂ ಮಳೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ವಾಡಿಕೆಗಿಂತ ಶೇ 300ರಷ್ಟು ಹೆಚ್ಚಿನ ಮಳೆಯಾಗಿದೆ. ಈ ವಿಚಾರವಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. ಕೆಲವು ಪ್ರದೇಶದ ಜನರಿಗೆ ಸ್ಥಳಾಂತರ ಮಾಡಲು ಹೇಳಿದ್ದೇವೆ. ಕೇಂದ್ರಿಯ ವಿಹಾರ ಹಾಗೂ ಟಾಟಾನಗರದಿಂದ ಸುಮಾರು 600 ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಹೇಳಿದ್ದೇವೆ. 5 ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ತಂಡಗಳ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಕೆಲವು ಅಪಾರ್ಟ್ಮೆಂಟ್ ಗಳನ್ನು 8 ದಿನಗಳ ಕಾಲ ಮುಚ್ಚಲು ಸೂಚನೆ ನೀಡಲಾಗಿದೆ. 20-25 ಹೆಚ್ ಪಿ ಯಂತ್ರಗಳನ್ನು ಹಾಕಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. 20 ಕಡೆಗಳಲ್ಲಿ ನೀರನ್ನು ತೆಗೆಯಲಾಗುತ್ತಿದೆ ಎಂದರು.