ಈ ಬಾರಿಯ ಮುಂಗಾರು, ನಿಗದಿಯಂತೆ ರಾಜ್ಯ ಪ್ರವೇಶಿಸಿದ್ದು ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬರದಿಂದ ತತ್ತರಿಸಿದ್ದ ರಾಜ್ಯದ ಜನ ಈಗ ಸುರಿಯುತ್ತಿರುವ ಮಳೆಯಿಂದ ಸಂತಸಗೊಂಡಿದ್ದು ಇದರ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರು ಜನ ಮಹಾಮಳೆಗೆ ಕಂಗಾಲಾಗಿ ಹೋಗಿದ್ದಾರೆ.
ರಾಜಾ ಕಾಲುವೆ ನಿರ್ವಹಿಸಲು ಬಿಬಿಎಂಪಿ ವಿಫಲತೆ ಅನುಭವಿಸುತ್ತಿರುವ ಕಾರಣ ಸ್ವಲ್ಪ ಜಾಸ್ತಿ ಮಳೆ ಬಂದರೂ ಕೂಡ ಮಳೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಅಲ್ಲದೆ ಹಳೆಯ ಮರಗಳು ಯಾವಾಗ ಮೈ ಮೇಲೆ ಬೀಳುತ್ತದೆ ಎಂಬ ಆತಂಕದಲ್ಲಿಯೇ ಅಲ್ಲಿನ ಜನ ಓಡಾಡುವಂತಾಗಿದೆ.
ಭಾನುವಾರ ಸಹ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಅಲ್ಲದೆ ಕೆಲವೊಂದು ಭಾಗಗಳಲ್ಲಿ ವಿದ್ಯುತ್ ಸಹ ವ್ಯತ್ಯಯವಾಗಿತ್ತು. ಇದರ ಮಧ್ಯೆ ಭಾನುವಾರದಂದು ಬಿದ್ದ ಭಾರಿ ಮಳೆ ಕುರಿತು ರವಿ ಕೀರ್ತಿಗೌಡ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಮುಖ ಮಾಹಿತಿ ಒಂದನ್ನು ಹಂಚಿಕೊಂಡಿದ್ದು, 1891 ಜೂನ್ 18ರಂದು 101.6 ಮಿಲಿಮೀಟರ್ ಮಳೆ ಸುರಿದಿತ್ತು. ಭಾನುವಾರ 110 ಮಿ.ಮೀ ಮಳೆಯಾಗಿದ್ದು, ಹೀಗಾಗಿ 133 ವರ್ಷಗಳ ಹಳೆ ದಾಖಲೆ ಮುರಿದಿದೆ ಎಂದು ಹೇಳಿದ್ದಾರೆ.